ನವದೆಹಲಿ:ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು (ಜೆಎನ್‌ಯುಎಸ್‌ಯು) ಸುಮಾರು ಮೂರು ದಶಕಗಳ ನಂತರ ಎಡಪಕ್ಷ ಬೆಂಬಲಿತ ಮೊದಲ ದಲಿತ ಅಧ್ಯಕ್ಷರನ್ನು ಭಾನುವಾರ ಆಯ್ಕೆ ಮಾಡಿತು. ಯುನೈಟೆಡ್ ಲೆಫ್ಟ್ ಪ್ಯಾನೆಲ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಪ್ರತಿಸ್ಪರ್ಧಿ ಆರ್‌ಎಸ್‌ಎಸ್-ಸಂಯೋಜಿತ ಎಬಿವಿಪಿ ಸೋಲು ಅನುಭವಿಸಿತು.
ನಾಲ್ಕು ವರ್ಷಗಳ ವಿರಾಮದ ನಂತರ ನಡೆದ ಚುನಾವಣೆಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನ (ಎಐಎಸ್‌ಎ) ಧನಂಜಯ್ 2,598 ಮತಗಳನ್ನು ಪಡೆಯುವ ಮೂಲಕ ಜೆಎನ್‌ಯುಎಸ್‌ಯು ಅಧ್ಯಕ್ಷ ಸ್ಥಾನಕ್ಕೇರಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಉಮೇಶ್ ಸಿ.ಅಜ್ಮೀರಾ 1,676 ಮತಗಳನ್ನು ಗಳಿಸಿದರು.
ಧನಂಜಯ್ ಬಿಹಾರದ ಗಯಾ ಮೂಲದವರು. 1996-97ರಲ್ಲಿ ಚುನಾಯಿತರಾಗಿದ್ದ ಬಟ್ಟಿ ಲಾಲ್ ಬೈರ್ವಾ ಅವರ ನಂತರ ಇವರು ಎಡಪಕ್ಷದಿಂದ ಆಯ್ಕೆಯಾದ ಮೊದಲ ದಲಿತ ಅಧ್ಯಕ್ಷರಾಗಿದ್ದಾರೆ.
ಗೆಲುವಿನ ನಂತರ ಮಾತನಾಡಿದ ಧನಂಜಯ್, "ಈ ಗೆಲುವು ಜೆಎನ್‌ಯು ವಿದ್ಯಾರ್ಥಿಗಳು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ತಿರಸ್ಕರಿಸುವ ಜನಾಭಿಪ್ರಾಯ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸ ತೋರಿಸಿದ್ದಾರೆ. ನಾವು ಅವರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತೇವೆ. ಕ್ಯಾಂಪಸ್‌ನಲ್ಲಿ ಮಹಿಳೆಯರ ಸುರಕ್ಷತೆ, ನಿಧಿ ಕಡಿತ, ವಿದ್ಯಾರ್ಥಿ ವೇತನ ಹೆಚ್ಚಳ, ಮೂಲಸೌಕರ್ಯ ಮತ್ತು ನೀರಿನ ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿ ಒಕ್ಕೂಟ ಪ್ರಮುಖ ಆದ್ಯತೆ ನೀಡುತ್ತದೆ" ಎಂದು ತಿಳಿಸಿದರು.