ಶ್ರೀನಗರ:ಉಗ್ರರ ಕಾಟದಿಂದ ಬಳಲುತ್ತಿರುವ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು ಎಂದು ಅಲ್ಲಿನ ಆಡಳಿತ ಸೂಚನೆ ನೀಡಿದೆ. ಜೊತೆಗೆ ಅದರ ವಿಡಿಯೋ, ಚಿತ್ರಗಳನ್ನು ಹಂಚಿಕೊಳ್ಳುವಂತೆ ತಾಕೀತು ಮಾಡಿದೆ.
ಈ ಬಗ್ಗೆ ಜಮ್ಮು ಕಾಶ್ಮೀರ ಆಡಳಿತವು ಎಲ್ಲ ಶಾಲೆಗಳ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಜನವರಿ 26 ರಂದು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವವನ್ನು ಉತ್ಸಾಹ ಮತ್ತು ರಾಷ್ಟ್ರೀಯ ಹೆಮ್ಮೆಯಿಂದ ಆಚರಿಸಬೇಕು. ಸಂಸ್ಥೆಗಳ ಮುಖ್ಯಸ್ಥರು ರಾಷ್ಟ್ರಧ್ವಜವನ್ನು ಹಾರಿಸಬೇಕು. ಎಲ್ಲಾ ಸಿಬ್ಬಂದಿ, ಸದಸ್ಯರ ಉಪಸ್ಥಿತಿಯಲ್ಲಿ ಇದನ್ನು ಮಾಡಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಿ ಬಳಿಕ, ವಲಯ ಮಟ್ಟ, ಬ್ಲಾಕ್ ಮಟ್ಟ, ತಹಸಿಲ್ ಮಟ್ಟದಲ್ಲಿ ಧ್ವಜಾರೋಹಣ ಮಾಡಬೇಕು ಎಂದು ಜಿಲ್ಲೆಯ ಎಲ್ಲಾ ಸಂಸ್ಥೆಗಳಿಗೆ ಮುಖ್ಯ ಶಿಕ್ಷಣಾಧಿಕಾರಿಗಳು ನೋಟಿಸ್ ರವಾನಿಸಿದ್ದಾರೆ.
ವಿಡಿಯೋ, ಚಿತ್ರ ಹಂಚಿಕೊಳ್ಳಿ:ಶಿಕ್ಷಣ ಸಂಸ್ಥೆಗಳಲ್ಲಿ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಿದ ಬಳಿಕ, ಅದರ ವಿಡಿಯೋ, ಚಿತ್ರಗಳನ್ನು ಅಧಿಕೃತ ಅಂಚೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಶಾಲಾ ಮುಖ್ಯಸ್ಥರು ಕಳುಹಿಸಬೇಕು. ಕಾಶ್ಮೀರ ಕಣಿವೆಯ ಇತರ ಜಿಲ್ಲೆಗಳಲ್ಲಿರುವ ಎಲ್ಲ ಶಾಲೆಗಳಿಗೂ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆ. ಅಂದು ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಇಂಟರ್ನೆಟ್, ಜನರ ಸಂಚಾರದ ಮೇಲೆ ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಆಡಳಿತ ಹೇಳಿದೆ.