ಸಂಭಲ್ (ಉತ್ತರ ಪ್ರದೇಶ) : ಬೈಕ್ಗೆ ಡಿಕ್ಕಿ ಹೊಡೆದ ಬೊಲೆರೊ ವಾಹನವೊಂದು ಆ ಬೈಕ್ ಅನ್ನು ಎರಡು ಕಿಲೋ ಮೀಟರ್ ವರೆಗೆ ಎಳೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಸಂಭಲ್ನಲ್ಲಿ ನಡೆದಿದೆ. ಬೈಕ್ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ರಭಸದಿಂದ ಸಾಗಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ ಸಂಜೆ ನಡೆದ ಈ ಭಯಾನಕ ಅಪಘಾತದ ದೃಶ್ಯಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯದಲ್ಲಿ ಬೆಂಕಿ ಕಿಡಿಯನ್ನು ಲೆಕ್ಕಿಸದೇ ಎಸ್ಯುವಿ ವಾಹನ ಬೈಕ್ ಅನ್ನು ಎಳೆದೊಯ್ದಿದೆ. ಎಸ್ಯುವಿಯಲ್ಲಿ ಗ್ರಾಮ್ ಪ್ರಧಾನ್ ಎಂಬ ಹೆಸರಿನ ಬಿಜೆಪಿ ಸ್ಟಿಕರ್ ಕಂಡುಬಂದಿದೆ.
ಸಂಭಲ್ನ ಕೊಟ್ವಾಲಿ ಪ್ರದೇಶದಲ್ಲಿನ ಮೊರದಬಾದ್ನ ವಜಿದ್ಪುರಮ್ ಬಳಿಕ ಈ ಘಟನೆ ನಡೆದಿದೆ. ಮೊರ್ದಾಬಾದ್ ಜಿಲ್ಲೆಯ ಸುಖ್ವೀರ್ (50) ಭಾನುವಾರ ಮಾವನ ಮನೆಯಿಂದ ಸಂಭಲ್ನ ಹಯತ್ನಗರದಲ್ಲಿರುವ ತನ್ನ ಮನೆಗೆ ಮರಳುತ್ತಿದ್ದರು. ಈ ವೇಳೆ ಮೊರದಾಬಾದ್ ರಸ್ತೆಯಲ್ಲಿ ಎಸ್ಯುವಿ ವಾಹನ ಡಿಕ್ಕಿಯಾಗಿದೆ. ಗಾಯಗೊಂಡ ಸುಖ್ವೀರ್ ಅವರನ್ನು ತಕ್ಷಣಕ್ಕೆ ಸಂಭಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೊರದಾಬಾದ್ಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡಿರುವ ಸುಖ್ವೀರ್ ಅವರಿಂದ ಸೋಮವಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ಮಾತಾಡಿರುವ ಪೊಲೀಸ್ ಅಧಿಕಾರಿ ಅನುಜ್ ಕುಮಾರ್, ಹೃದಯಹೀನ ಕೃತ್ಯ ಎಸಗಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಸ್ಯುವಿಯನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಬೈಕ್ ಮತ್ತು ಪಾದಚಾರಿಗೆ ವಾಹನವೊಂದು ಡಿಕ್ಕಿ ಹೊಡೆದು ಹಲವು ಕಿ. ಮೀ ದೂರ ಅವರನ್ನು ಎಳೆದೊಯ್ದಿದ್ದ ಘಟನೆ ಕೂಡ ಬೆಳಕಿಗೆ ಬಂದಿತ್ತು. ಈ ತಿಂಗಳ ಆರಂಭದಲ್ಲಿ ಕೂಡ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ವಾಹನವೊಂದು ಬೈಕ್ ಸವಾರನನ್ನು 30 ಕಿ. ಮೀ ದೂರ ಎಳೆದು ಸಾಗಿತ್ತು. ಪಯಗ್ಪುರ್ನ ನಿವಾಸಿ ನರೇಂದ್ರ ಕುಮಾರ್ ಹಲ್ದಾರ್ (35) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಡಿ. 19ರಂದು ಮನೆಗೆ ಮರಳುವಾಗ ಈ ದುರ್ಘಟನೆ ನಡೆದಿತ್ತು.
ಪೊಲೀಸ್ ಅಧಿಕಾರಿಗಳ ಪ್ರಕಾರ, ಹಲ್ದಾರ್ ದೇಹವೂ ವಾಹನದಲ್ಲಿ ಸಿಲುಕಿ ಹಲವು ದೂರ ಎಳೆದೊಯ್ಯಲ್ಪಟ್ಟಿತ್ತು.
ಇದನ್ನೂ ಓದಿ: ರೈಲಿನಡಿ ತಳ್ಳಿ ಯುವತಿ ಕೊಂದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಚೆನ್ನೈ ಮಹಿಳಾ ಕೋರ್ಟ್