ರಾಂಚಿ (ಜಾರ್ಖಂಡ್):ಭಾನುವಾರ ಸಂಜೆ ಹೈದರಾಬಾದ್‌ನಿಂದ ರಾಂಚಿಗೆ ಮರಳಿದ ಕೂಡಲೇ ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ ಇಲ್ಲಿನ ಬಿರ್ಸಾ ಮುಂಡಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕರನ್ನು ಎರಡು ಬಸ್‌ಗಳಲ್ಲಿ ನಗರದ ಸರ್ಕ್ಯೂಟ್ ಹೌಸ್‌ಗೆ ಕರೆದೊಯ್ಯಲಾಯಿತು.
''ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ. ನಮಗೆ 48 ರಿಂದ 50 ಶಾಸಕರ ಬೆಂಬಲವಿದೆ'' ಎಂದು ಸಚಿವ ಆಲಂಗೀರ್ ಆಲಂ ಹೇಳಿದ್ದಾರೆ. ಜೆಎಂಎಂ ಶಾಸಕ ಮಿಥಿಲೇಶ್ ಠಾಕೂರ್ ಅವರು ಜೆಎಂಎಂ ನೇತೃತ್ವದ ಮೈತ್ರಿ ಒಕ್ಕೂಟವು ವಿಶ್ವಾಸ ಮತ ಗೆಲ್ಲಲಿದೆ. ಬಿಜೆಪಿಯ ಹಲವು ಶಾಸಕರು ಕೂಡ ರಾಜ್ಯದಲ್ಲಿ ಮೈತ್ರಿಗೆ ಬೆಂಬಲ ನೀಡಿದ್ದಾರೆ ಎಂದು ಎಂದು ತಿಳಿಸಿದ್ದಾರೆ.
''ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿಕೂಟ ಸೋಲುವುದು ಖಚಿತ. ಹೈದರಾಬಾದ್‌ನಲ್ಲಿರುವ ಶಾಸಕರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಇದು ಗೆಲ್ಲುವ ವಿಶ್ವಾಸವಿಲ್ಲ ಎಂದು ಸೂಚಿಸುತ್ತದೆ'' ಎಂದು ಬಿಜೆಪಿಯ ಮುಖ್ಯ ಸಚೇತಕ ಬಿರಂಚಿ ನಾರಾಯಣ್ ಹೇಳಿದ್ದಾರೆ.
ಬಿಜೆಪಿ ವಿರೋಧ ನಡುವೆಯೇ ವಿಶ್ವಾಸ ನಿರ್ಣಯ:ಸದನದಲ್ಲಿ ತನ್ನ ಕಾರ್ಯತಂತ್ರವನ್ನು ರೂಪಿಸಲು ಪ್ರತಿಪಕ್ಷ ಬಿಜೆಪಿ ಭಾನುವಾರ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಚಂಪೈ ಸೊರೇನ್ ಅವರು ಹಿಂದಿನ ಹೇಮಂತ್ ಸೊರೇನ್ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದ್ದರಿಂದ ಕೇಸರಿ ಪಕ್ಷವು ಸದನದಲ್ಲಿ ವಿಶ್ವಾಸ ನಿರ್ಣಯವನ್ನು ವಿರೋಧಿಸಲಿದೆ. ಇದು ಹೇಮಂತ್ ಸೊರೇನ್ ಸರ್ಕಾರದ ಭಾಗ 2 ಅನ್ನು ಪ್ರತಿಬಿಂಬಿಸುತ್ತದೆ. ಇದು ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳಲ್ಲಿ ತೊಡಗುತ್ತದೆ'' ಎಂದು ನಾರಾಯಣ್ ಆರೋಪಿಸಿದ್ದಾರೆ.
ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ 43 ಶಾಸಕರ ಬೆಂಬಲ:ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು ಕಳೆದ ಮೂರು ದಿನಗಳಿಂದ ರಾಂಚಿಗೆ ತೆರಳುವ ಮೊದಲು ಹೈದರಾಬಾದ್‌ನ ರೆಸಾರ್ಟ್‌ನಲ್ಲಿದ್ದರು. ಫೆಬ್ರವರಿ 2 ರಂದು ಸುಮಾರು 38 ಶಾಸಕರು ಎರಡು ವಿಮಾನಗಳಲ್ಲಿ ಹೈದರಾಬಾದ್‌ಗೆ ತೆರಳಿದ್ದರು. ವಿಶ್ವಾಸ ಮತದ ಪೂರ್ವದಲ್ಲಿ ಬಿಜೆಪಿ ತಂತ್ರಗಾರಿಕೆ ಮಧ್ಯೆಯೇ 81 ಸದಸ್ಯರ ಜಾರ್ಖಂಡ್ ಅಸೆಂಬ್ಲಿಯಲ್ಲಿ 43 ಶಾಸಕರ ಬೆಂಬಲವನ್ನು ಒಕ್ಕೂಟವು ಗುರುವಾರ ಪ್ರಕಟಿಸಿದೆ. ಎರಡು ದಿನಗಳ ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಸೋಮವಾರ ಜಾರ್ಖಂಡ್‌ನಲ್ಲಿ ಚಂಪೈ ಸೊರೇನ್ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚಿಸಲಿದೆ.
ಫೆಬ್ರವರಿ 2 ರಂದು ರಾಜಭವನದಲ್ಲಿ ರಾಜ್ಯಪಾಲ ಸಿ. ಪಿ. ರಾಧಾಕೃಷ್ಣನ್ ಅವರು ಸೊರೇನ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದರು. ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಅಲಂಗೀರ್ ಆಲಂ ಮತ್ತು ಆರ್‌ಜೆಡಿ ನಾಯಕ ಸತ್ಯಾನಂದ್ ಭೋಕ್ತಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇ.ಡಿ ಕಸ್ಟಡಿಯಲ್ಲಿ ಮಾಜಿ ಸಿಎಂ ಹೇಮಂತ್ ಸೊರೇನ್:ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೇನ್ ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಹಿಂದಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬುಧವಾರ ಬಂಧಿಸಿತ್ತು. ವಿಶೇಷ ಪಿಎಂಎಲ್‌ಎ (ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ) ನ್ಯಾಯಾಲಯವು ಅವರಿಗೆ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು. ಶುಕ್ರವಾರ ಹೇಮಂತ್ ಸೊರೇನ್ ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತ್ತು. ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವಿನ ಮೈತ್ರಿಯು 47 ಶಾಸಕರನ್ನು ಹೊಂದಿದೆ ಮತ್ತು ಜೊತೆಗೆ ಹೊರಗಿನ ಒಬ್ಬ ಸಿಪಿಎಂಎಲ್ (ಎಲ್) ಶಾಸಕರು ಬೆಂಬಲಿಸಿದ್ದಾರೆ.
ಇದನ್ನೂ ಓದಿ:ಜಾರ್ಖಂಡ್ ನಂತರ ಹೈದರಾಬಾದ್‌ಗೆ ಬಂದ ಬಿಹಾರ ಕಾಂಗ್ರೆಸ್ ಶಾಸಕರು