ಮೈಸೂರು: "ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುವುದು ಕಾಂಗ್ರೆಸ್ಗೆ ಚಟವಾಗಿದೆ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಸ್ವಾಮಿ ಟೀಕಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹೋರಾಟದ ವಿಚಾರವಾಗಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಯಾವತ್ತಾದರೂ ಅವರನ್ನು ಗೌರವಿಸಿತ್ತಾ?. ಸಂವಿಧಾನ ತಿದ್ದುಪಡಿ ಮಾಡಿ ಪೀಠಿಕೆ ಬದಲಾಯಿಸಿದ್ದು ಕಾಂಗ್ರೆಸ್" ಎಂದು ವಾಗ್ದಾಳಿ ನಡೆಸಿದರು.
"ಬಿಜೆಪಿ ಎಂದೂ ಅಂಥ ಕೆಲಸ ಮಾಡಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಯಾವ ಕಾರಣಕ್ಕೆ ತಂದರು?. ಆಗ ದೇಶಕ್ಕೆ ಗಂಡಾಂತರ ಬಂದಿತ್ತಾ?, ಅವರ ಸ್ಥಾನ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಿಸಿದರು. ಎರಡು ವರ್ಷ ದೇಶದಲ್ಲಿ ಸಂವಿಧಾನ ಆಡಳಿತ ಇರಲಿಲ್ಲ. ಇದನ್ನು ಮಾಡಿದ್ದು ಕಾಂಗ್ರೆಸ್. ಇದಕ್ಕೆಲ್ಲಾ ಕೇಂದ್ರದ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರ ಕೊಡುವ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ ಅಂತ ಅಮಿತ್ ಶಾ ಹೇಳಿದರು. ಇದಕ್ಕೆ ಕೋಪ ಬರುತ್ತೆ, ಯಾವತ್ತೂ ಇಲ್ಲದ ಅಂಬೇಡ್ಕರ್ ಫೋಟೋ, ನೀಲಿ ಶಾಲು ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಹೋರಾಟ ಮಾಡುತ್ತಿರುವ ದಲಿತ ಸಂಘಟನೆಗಳಿಗೆ ಮನವಿ. ಮೊದಲು ಯಾರು ಅಂಬೇಡ್ಕರ್ಗೆ ಮೋಸ ಮಾಡಿದ್ರೂ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್‌ನವರು ದಲಿತ ಸಂಘಟನೆಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ದೂರಿದರು.
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಬಗ್ಗೆ ಮಾತನಾಡಿ, "ಇದೊಂದು ಅಮಾನವೀಯ ಘಟನೆ. ಈ ಕೃತ್ಯವನ್ನು ಖಂಡಿಸುತ್ತೇನೆ. ಈ ಸಂಬಂಧ ಸೂಕ್ತ ತನಿಖೆ ಮಾಡಬೇಕು. ತಪ್ಪಿತಸ್ಥರನ್ನು ಶಿಕ್ಷಿಸಬೇಕು" ಎಂದರು.
ದಲಿತರನ್ನು ತುಳಿಯುವ ಮಾಫಿಯಾ: ಮೈಸೂರು ನಗರ ಮತ್ತು ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ನಗರದ ಕುರಿಮಂಡಿ ಭಾಗದ ಸಿದ್ದಪ್ಪಾಜಿ ದೇವಸ್ಥಾನದ ಪಾರ್ಕ್ ಆವರಣದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, "ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ಡಾ.ಹೆಚ್.ಸಿ.ಮಹದೇವಪ್ಪ ಅವರು ದಲಿತರನ್ನು ತುಳಿಯುವ ಮಾಫಿಯಾ ಮಾಡುತ್ತಿದ್ದಾರೆ. ಇವರಿಂದ ದಲಿತರು ಬೆಳೆಯುವ ಅವಕಾಶ ಇಲ್ಲ" ಎಂದು ಆರೋಪಿಸಿದರು.
"ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ, ಮೈಸೂರು ಭಾಗದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ, ಕೋಲಾರ ಕಡೆ ಕೆ.ಹೆಚ್.ಮುನಿಯಪ್ಪ ಅವರು ಹಿಡಿತ ಸಾಧಿಸುತ್ತಿದ್ದಾರೆ. ಇವರ ಕುಟುಂಬದವರು ಮಾತ್ರ ಬೆಳೆಯಬೇಕು, ದಲಿತ ಸಮುದಾಯದ ಮತ್ತೊಬ್ಬ ನಾಯಕನನ್ನು ಬೆಳೆಯಲು ಇವರು ಬಿಟ್ಟಿದ್ದಾರೆಯೇ" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಹಸುಗಳ ಕೆಚ್ಚಲು ಕೊಯ್ದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ: ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: ನಮ್ಮ ಡ್ರಾಮ (ಡಿ) ಕಿಂಗ್ (ಕೆ) ಶಿವಕುಮಾರ್ ಇಷ್ಟೆಲ್ಲಾ ಮಾಡ್ತಿರೋದು ಸಿಎಂ ಗಾದಿಗಾಗಿ: ಸಿ.ಟಿ.ರವಿ