ಕಾರವಾರ(ಉತ್ತರ ಕನ್ನಡ): ಮುಂಡಗೋಡದ ಉದ್ಯಮಿ ಅಪಹರಣ ಪ್ರಕರಣ ಸಂಬಂಧ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಮತ್ತು ಇನ್ನು ಮೂವರನ್ನು ಬೆನ್ನಟ್ಟಿ ಬಂಧಿಸಲಾಗಿದೆ.
ಜಮೀರ್ ಅಹ್ಮದ್ ದುರ್ಗಾವಾಲೆ ಎಂಬವರನ್ನು ಅಪಹರಿಸಿದ್ದ ಆರೋಪಿಗಳಾದ ರಹೀಮ್ ಅಲ್ಲಾಹುದ್ದೀನ್ ಹಾಗೂ ಅಜಯ್ ಮಡ್ಲಿ ಎಂಬವರಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡಿರುವ ಆರೋಪಿಗಳಿಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡಗೋಡ ಠಾಣಾ ಸಿಪಿಐ, ಪಿಎಸ್ಐ ಹಾಗೂ ಓರ್ವ ಪೊಲೀಸ್ ಕಾನ್ಸ್‌ಟೇಬಲ್‌ಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಮೀರ್ ಅಹ್ಮದ್ ದುರ್ಗಾವಾಲೆ ಎಂಬವರನ್ನು ಗುರುವಾರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಇದರ ನಡುವೆ ಅಪಹರಣಕಾರರು ಗದಗ ಜಿಲ್ಲೆಯ ಟೋಲ್ ಬಳಿ ಜಮೀರ್ ಅವರನ್ನು ಬಿಟ್ಟು ಪರಾರಿಯಾಗಿದ್ದರು. ನಂತರ ಪೊಲೀಸರು ಬಂಧಿಸಲು ಹೋದಾಗ ಆರೋಪಿಗಳು ದಾಳಿಗೆ ಮುಂದಾಗಿದ್ದರು. ಇದರಿಂದಾಗಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ಒಟ್ಟು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಹೀಮ್ ಮುಂಡಗೋಡಕ್ಕೆ ಭೇಟಿ ನೀಡಿದ ವೇಳೆ ಪರಿಚಯಸ್ಥರೊಟ್ಟಿಗೆ ಉದ್ಯಮಿ ಜಮೀರ್ ಮನೆಗೆ ತೆರಳಿದ್ದ. ಮನೆಯಲ್ಲಿದ್ದ ಕಾರು ಮತ್ತು ಬೈಕ್ಗಳನ್ನು ನೋಡಿ ಆತನ ಬಳಿ ಹಣ ಇದೆ ಎನ್ನುವ ಕಾರಣಕ್ಕೆ ತನ್ನ ಸಹಚರರ ಜೊತೆ ಸೇರಿ ಅಪಹರಣ ಮಾಡಿದ್ದ. ಉದ್ಯಮಿಯ ಕುಟುಂಬಸ್ಥರು 18 ಲಕ್ಷ ಹಣ ಕೊಟ್ಟ ನಂತರ ಆರೋಪಿಗಳು ಜಮೀರ್ನನ್ನು ಟೋಲ್ಗೇಟ್ವೊಂದರ ಬಳಿ ಬಿಟ್ಟು ಹೋಗಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಪ್ರತಿಕ್ರಿಯಿಸಿ, "ಮುಂಡಗೋಡದ ಉದ್ಯಮಿ ಅಪಹರಣ ಪ್ರಕರಣ ಸಂಬಂಧ ಆರೋಪಿಗಳ ಬೆನ್ನಟ್ಟಿದ್ದ ಪೊಲೀಸರು, ಅವರಿಗೆ ಶರಣಾಗುವಂತೆ ಕೋರಿದ್ದರು. ಆದರೆ ಆರೋಪಿಗಳು ಖಾರದ ಪುಡಿ ಎರಚಿ, ಕಲ್ಲಿನಿಂದ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರು. ಆರೋಪಿಗಳು ಶರಣಾಗದಿದ್ದಾಗ ಪೊಲೀಸರು, ರಹೀಮ್ ಮತ್ತು ಅಜಯ್ ಎಂಬ ಆರೋಪಿತರ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಾರಿಯಾಗುತ್ತಿದ್ದ ಇನ್ನು ಮೂವರನ್ನು ಬೆನ್ನಟ್ಟಿ ಬಂಧಿಸಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೊಪ್ಪಳ: ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪತಿ ಸೆರೆ
ಇದನ್ನೂ ಓದಿ: ಚಪ್ಪಲಿಯಿಂದ ಹೊಡೆದ ಮಹಿಳೆಯ ಪತಿಯ ಕೊಲೆಗೆ ಸ್ಕೆಚ್: ಮದ್ಯದ ನಶೆಯಲ್ಲಿ ಮತ್ತೊಬ್ಬನಿಗೆ ಇರಿದು ಜೈಲುಪಾಲು