ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅತಿಶಿ ಕ್ರೌಡ್ ಫಂಡಿಂಗ್ ಅಭಿಯಾನ ಪ್ರಾರಂಭಿಸಿದ್ದಾರೆ. ಅಭಿಯಾನದಲ್ಲಿ 40 ಲಕ್ಷ ರೂ. ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಈ ಹಣವನ್ನು ಚುನಾವಣಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಯಾವಾಗಲೂ ಸಾರ್ವಜನಿಕ ದೇಣಿಗೆಗಳನ್ನೇ ಅವಲಂಬಿಸಿದ್ದು, ದೊಡ್ಡ ಉದ್ಯಮಿಗಳಿಂದ ಹಣ ಪಡೆಯುವುದಿಲ್ಲ ಎಂದು ಅತಿಶಿ ಒತ್ತಿ ಹೇಳಿದರು. ಜನರ ಸಣ್ಣ ಸಣ್ಣ ದೇಣಿಗೆಗಳಿಂದಲೇ ಎಎಪಿ ಹಿಂದಿನ ಚುನಾವಣೆಗಳಲ್ಲಿ ಹೇಗೆ ಗೆದ್ದಿತು ಎಂಬುದನ್ನು ನೆನಪಿಸಿಕೊಂಡರು.
"... ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ರಾಜಕೀಯವನ್ನು ಬೆಂಬಲಿಸಿ ಜನ ಹಣ ದಾನ ಮಾಡುತ್ತಿದ್ದಾರೆ. ನಾವು ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಉದ್ಯಮಿಗಳಿಂದ ದೇಣಿಗೆ ಪಡೆಯುವುದಿಲ್ಲ. ಎಎಪಿ ಸರ್ಕಾರ ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತದೆ. ಕಾಲ್ಕಾಜಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾನು ಚುನಾವಣಾ ವೆಚ್ಚಗಳಿಗಾಗಿ 40 ಲಕ್ಷ ರೂ.ಗಳ ಕ್ರೌಡ್ ಫಂಡಿಂಗ್ ಅಭಿಯಾನ ಪ್ರಾರಂಭಿಸುತ್ತಿದ್ದೇನೆ. ಚುನಾವಣೆಗಾಗಿ ಈ ಅಭಿಯಾನ ನಡೆಸುವುದು ನನಗೆ ಅಗತ್ಯವಾಗಿದೆ. ಜನರು ತಮಗಿಷ್ಟವಾದಷ್ಟು ಮೊತ್ತವನ್ನು ದಾನ ಮಾಡಬಹುದು" ಎಂದು ಅತಿಶಿ ಸುದ್ದಿಗಾರರಿಗೆ ತಿಳಿಸಿದರು.
ಕ್ರೌಡ್ ಫಂಡಿಂಗ್ ಕೋರಿದ ಮೊದಲ ಹಾಲಿ ಸಿಎಂ: 70,000 ಕೋಟಿ ರೂ.ಗಳ ಬಜೆಟ್ ಮಂಡಿಸಿರುವ ಅತಿಶಿ, ದೇಶದ ಇತಿಹಾಸದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕ್ರೌಡ್ ಫಂಡಿಂಗ್ ಕೋರಿದ ಮೊದಲ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಎಪಿ ನಾಯಕಿ ರೀನಾ ಗುಪ್ತಾ ಹೇಳಿದರು. ಎಎಪಿ ರಚನೆಯಾದಾಗಿನಿಂದಲೂ ಅದು ಚುನಾವಣೆಯಲ್ಲಿ ಸ್ಪರ್ಧಿಸಲು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಅವರು ಹೇಳಿದರು.
ಎಎಪಿ ಆಡಳಿತ ದೆಹಲಿಗೆ ಅಪಾಯಕಾರಿ-ಬಿಜೆಪಿ: ಏತನ್ಮಧ್ಯೆ, ಎಎಪಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ವ್ಯಾಪಕ ಭ್ರಷ್ಟಾಚಾರ, ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಸಮರ್ಥತೆ ಮತ್ತು ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ. ಎಎಪಿಯ ಆಡಳಿತ ದೆಹಲಿಗೆ ಅಪಾಯಕಾರಿಯಾಗಿದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಚುನಾವಣೆಯಲ್ಲಿ ವಂಚನೆ ಎಸಗುವ ಪಕ್ಷ-ಎಎಪಿ: ಮತ್ತೊಂದೆಡೆ, ಬಿಜೆಪಿ ದಾರಿಯಲ್ಲಿ ಕೆಟ್ಟದಾಗಿ ಬೈದಾಡಿಕೊಂಡು ತಿರುಗುವ ಪಕ್ಷವಾಗಿದೆ ಎಂದು ಆರೋಪಿಸಿರುವ ಎಎಪಿ, ಬಿಜೆಪಿಯು ಅಪ್ರಾಮಾಣಿಕ ತಂತ್ರಗಳನ್ನು ಮಾಡುವ ಮತ್ತು ಚುನಾವಣೆಯಲ್ಲಿ ವಂಚನೆ ಎಸಗುವ ಪಕ್ಷವಾಗಿದೆ ಎಂದು ಹೇಳಿದೆ.
ದೆಹಲಿ ವಿಧಾನಸಭಾ ಚುನಾವಣೆ:
- ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ
- ಫೆಬ್ರವರಿ 8ರಂದು ಮತ ಎಣಿಕೆ
ಇದನ್ನೂ ಓದಿ: ದೆಹಲಿ ಚುನಾವಣೆ: ಕಾಂಗ್ರೆಸ್ನಿಂದ ಇದೇ ಮೊದಲ ಸಲ 'ಉಚಿತ'ವಲ್ಲದ ಭರವಸೆ ಘೋಷಣೆ - YUVA UDAAN YOJANA