ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದಲ್ಲಿ ಅದು ದೆಹಲಿಯ ಎಲ್ಲಾ ಕೊಳೆಗೇರಿಗಳನ್ನು ನೆಲಸಮಗೊಳಿಸಲಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ದೂರಿದ್ದಾರೆ.
ಇಲ್ಲಿನ ಶಕುರ್ ಬಸ್ತಿ ಪ್ರದೇಶದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಕೊಳೆಗೇರಿ ನಿವಾಸಿಗಳ ಕಲ್ಯಾಣಕ್ಕಿಂತ ಭೂಸ್ವಾಧೀನಕ್ಕೆ ಬಿಜೆಪಿ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು.
"ಮೊದಲು ಅವರು ನಿಮ್ಮ ಮತ ಕೇಳುತ್ತಾರೆ. ಚುನಾವಣೆಯ ನಂತರ ನಿಮ್ಮ ಭೂಮಿಯನ್ನು ಕಬಳಿಸುತ್ತಾರೆ" ಎಂದರು. ಬಿಜೆಪಿಯ 'ಜಹಾಂ ಜುಗ್ಗಿ ವಹಾನ್ ಮಕಾನ್' ಯೋಜನೆಯನ್ನು ಟೀಕಿಸಿದ ಅವರು, ಇದೊಂದು ಕಣ್ಣೊರೆಸುವ ತಂತ್ರ ಎಂದು ಬಣ್ಣಿಸಿದರು. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯವರು ಕೊಳೆಗೇರಿ ನಿವಾಸಿಗಳಿಗೆ ಕೇವಲ 4,700 ಫ್ಲ್ಯಾಟ್ಗಳನ್ನು ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.
ಕೊಳೆಗೇರಿ ನಿವಾಸಿಗಳಿಗೆ ಯಾವುದೇ ಪರ್ಯಾಯ ವಸತಿ ವ್ಯವಸ್ಥೆ ಮಾಡದೆಯೇ ಪ್ರಸ್ತುತ ಅವರು ವಾಸಿಸುತ್ತಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಯೋಜಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದರು. "ಅವರು ಎಲ್ಲಾ ಕೊಳೆಗೇರಿಗಳನ್ನು ನೆಲಸಮಗೊಳಿಸಲಿದ್ದಾರೆ ಮತ್ತು ಅಲ್ಲಿನ ನಿವಾಸಿಗಳ ಯೋಗಕ್ಷೇಮದ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ" ಎಂದು ಅವರು ಹೇಳಿದರು.
ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಕೊಳೆಗೇರಿ ನೆಲಸಮಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಂಡರೆ ಮತ್ತು ಹೊರಹಾಕಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೆ ಪುನರ್ವಸತಿ ಕಲ್ಪಿಸಿದರೆ ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಡಿಸೆಂಬರ್ 27ರಂದು ಕೊಳೆಗೇರಿ ಪ್ರದೇಶಗಳ ಭೂ ಸ್ವಾಧೀನ ನಿಯಮಗಳನ್ನು ಬದಲಾಯಿಸಿದ್ದು, ಚುನಾವಣೆಯ ನಂತರ ತಕ್ಷಣವೇ ಕೊಳೆಗೇರಿಗಳನ್ನು ನೆಲಸಮಗೊಳಿಸಲು ದಾರಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಶಕುರ್ ಬಸ್ತಿ ಕ್ಷೇತ್ರದ ಪಕ್ಷದ ಅಭ್ಯರ್ಥಿ, ಹಿರಿಯ ಎಎಪಿ ನಾಯಕ ಸತ್ಯೇಂದರ್ ಜೈನ್ ಕೇಜ್ರಿವಾಲ್ ಅವರೊಂದಿಗೆ ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದರು. ಜೈನ್ 2013, 2015 ಮತ್ತು 2020ರಲ್ಲಿ ಗೆದ್ದ ನಂತರ ನಾಲ್ಕನೇ ಬಾರಿಗೆ ಈ ಸ್ಥಾನದಿಂದ ಮರು ಆಯ್ಕೆ ಬಯಸಿದ್ದಾರೆ.
ದೆಹಲಿಯಲ್ಲಿ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.
2020ರ ಚುನಾವಣೆಯಲ್ಲಿ ದೆಹಲಿಯ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದ ಎಎಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ.