ಪಾಟ್ನಾ : ತಮ್ಮ 'ಜನ ಸುರಾಜ್' ಅಭಿಯಾನವು ಪ್ರಬಲ ರಾಜಕೀಯ ಪರ್ಯಾಯವಾಗಿ ಬೆಳೆಯುತ್ತಿದ್ದು, ವಿಶೇಷವಾಗಿ ಬಿಹಾರದ ಮುಸ್ಲಿಮರಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ರಾಜಕೀಯ ತಂತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕಿಶೋರ್ ಪ್ರತಿಪಾದಿಸಿದ್ದಾರೆ. ಭಾನುವಾರ ಇಲ್ಲಿನ ಹಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪಿಎಸಿ) ಸ್ಥಾಪಕ ಕಿಶೋರ್, 2025 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ವಿಕಸನಗೊಳ್ಳುವ ಗುರಿಯನ್ನು ಹೊಂದಿರುವ ತಮ್ಮ ಅಭಿಯಾನವು ಮುಸ್ಲಿಂ ಸಮುದಾಯದಲ್ಲಿ ಬಲವಾಗಿ ಬೇರೂರುತ್ತಿದೆ ಎಂದು ಒತ್ತಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯ ಸಚಿವ ಮೊನಜೀರ್ ಹಸನ್ ಮತ್ತು ಜನ ಸುರಾಜ್ ಬೆಂಬಲಿತ ಎಂಎಲ್ ಸಿ (ವಿಧಾನ ಪರಿಷತ್ ಸದಸ್ಯ) ಅಫಾಕ್ ಅಹ್ಮದ್ ಸೇರಿದಂತೆ ಪ್ರಮುಖ ಮುಸ್ಲಿಂ ಬುದ್ಧಿಜೀವಿಗಳು ಭಾಗವಹಿಸಿದ್ದರು.
ರಾಜ್ಯದ ಮುಸ್ಲಿಮರ ಆದ್ಯತೆಯ ಪಕ್ಷವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಆರ್ಜೆಡಿಯನ್ನು ನೇರವಾಗಿ ಹೆಸರಿಸದೆ ವಾಗ್ದಾಳಿ ನಡೆಸಿದ ಕಿಶೋರ್, "ಮುಸ್ಲಿಮರು ಲಾಟೀನ್ಗೆ (ಆರ್ಜೆಡಿಯ ಚುನಾವಣಾ ಚಿಹ್ನೆ) ಉರಿಯುವ ಎಣ್ಣೆಯಾಗಿ ಮುಂದುವರಿಯಬಾರದು. ಅವರು ರಾಜಕೀಯ ಜೀತದಾಳುಗಳಾಗುವುದನ್ನು ನಿಲ್ಲಿಸಬೇಕು ಮತ್ತು ಬದಲಿಗೆ ಮಹಾತ್ಮ ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ನಂಬುವ ಹಿಂದೂಗಳೊಂದಿಗೆ ಕೈಜೋಡಿಸಬೇಕು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು" ಎಂದು ಹೇಳಿದರು.