ಶ್ರೀನಗರ: ಆರು ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೂ ಮುನ್ನ ಸ್ಪೀಕರ್ ಆಯ್ಕೆ ನಡೆಯುತ್ತದೆ. ನೂತನ ಸ್ಪೀಕರ್ ಆಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಶಾಸಕ ಅಬ್ದುಲ್ ರಹೀಮ್ ರಾಥರ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಸ್ಪೀಕರ್ ಆಯ್ಕೆಯಾದ ನಂತರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸದನವನ್ನು ಉದ್ದೇಶಿಸಿ ಉದ್ಘಾಟನಾ ಭಾಷಣ ಮಾಡುವರು.
ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಶ್ರೀನಗರದಲ್ಲಿ ಮೈತ್ರಿಪಕ್ಷಗಳ ಪ್ರತ್ಯೇಕ ಸಭೆ ನಡೆಯಿತು. ಎನ್‌ಸಿ (ನ್ಯಾಷನಲ್ ಕಾನ್ಫರೆನ್ಸ್) ಸಭೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನಡೆದರೆ, ಕಾಂಗ್ರೆಸ್ ಸಭೆ ಪಕ್ಷದ ರಾಜ್ಯಾಧ್ಯಕ್ಷ ತಾರಿಕ್ ಹಮೀದ್ ಕರ್ರಾ ನೇತೃತ್ವದಲ್ಲಿ ನಡೆಯಿತು.
ಈ ಸಭೆಯ ಬಳಿಕ ಮಾತನಾಡಿದ ಹಮೀದ್ ಕರ್ರಾ, "ಅಧಿವೇಶನಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ" ಎಂದರು.
ಹಿರಿಯ ಎನ್‌ಸಿ ನಾಯಕ ಹಾಗೂ ಶಾಸಕ ಅಬ್ದುಲ್ ರಹೀಮ್ ರಾಥರ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ. 28 ಶಾಸಕರನ್ನು ಹೊಂದಿರುವ ಬಿಜೆಪಿ ಉಪ ಸ್ಪೀಕರ್ ಸ್ಥಾನಕ್ಕೆ ಶಾಸಕ ನರೇಂದರ್ ಸಿಂಗ್ ಹೆಸರನ್ನು ಈಗಾಗಲೇ ಪ್ರಸ್ತಾಪಿಸಿದೆ.
ಉಗ್ರರ ದಾಳಿ: ನಿನ್ನೆ (ಭಾನುವಾರ) ಶ್ರೀನಗರದ ವಾರದ ಬಜಾರ್‌ನಲ್ಲಿ ಸಾರ್ವಜನಿಕರ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಸಿಎಂ ಒಮರ್ ಅಬ್ದುಲ್ಲಾ ಖಂಡಿಸಿದ್ದು, "ಉಗ್ರರ ದಾಳಿಯನ್ನು ತಡೆಯಲು ಭದ್ರತಾ ಪಡೆಗಳು ಸಿದ್ಧತೆ ಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.