ಅಕೋಲಾ (ಮಹಾರಾಷ್ಟ್ರ) :ದೇಶದ ಸಂವಿಧಾನ, ನ್ಯಾಯ ವ್ಯವಸ್ಥೆ ಮತ್ತು ದೇಶದ ಆಶಯಗಳ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ಮತ್ತು ಅದರ ಇಂಡಿಯಾ ಬಣಕ್ಕೆ ಶಕ್ತಿ ಬಂದಲ್ಲಿ ದೇಶದ ಬಲವು ಕುಗ್ಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಕಾಂಗ್ರೆಸ್‌ಗೆ ದೇಶದ ಬಗ್ಗೆ ಚಿಂತನೆಯಿಲ್ಲ. ಅದು ಜಾತಿ ರಾಜಕಾರಣದಲ್ಲಿ ತೊಡಗಿದೆ. ದೇಶದಲ್ಲಿ ಅಶಾಂತಿ ನೆಲೆಸಿರಬೇಕು ಎಂಬುದೇ ಆ ಪಕ್ಷದ ಧ್ಯೇಯವಾಗಿದೆ. ಹೀಗಾಗಿ ಅದು ಮತ್ತೆ ಚಿಗುರೊಡೆಯಬಾರದು ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಅವರು, ಈ ದೇಶಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಅಂತಿಮ. ಅದರ ಆಶಯಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಸಮಾಜದಲ್ಲಿ ಕಂದಕ ಸೃಷ್ಟಿಸುವುದರಿಂದ ತನ್ನನ್ನು ತಾನು ಉಳಿಸಿಕೊಳ್ಳಲು ಅದು ಪ್ರಯತ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ನಾವೆಲ್ಲಾ ಒಂದಾಗಿದ್ದರೆ ಮಾತ್ರ ಸುರಕ್ಷಿತ:ಜಾತಿಗಳ ಮಧ್ಯೆ ಕಿಡಿ ಹೊತ್ತಿಸಿ, ಸಂಘರ್ಷ ಸೃಷ್ಟಿ ಮಾಡುವುದೇ ಕಾಂಗ್ರೆಸ್ನ ಚಾಳಿ. ಅದು ಎಂದಿಗೂ ನಾವೆಲ್ಲರೂ ಒಂದಾಗಿರಲು ಬಿಡುವುದಿಲ್ಲ. ಕಾರಣ, ಇಬ್ಭಾಗವೇ ಕಾಂಗ್ರೆಸ್ನ ಶಕ್ತಿ. ನಾವೆಲ್ಲರೂ ಜಾತಿ - ಮತಗಳನ್ನು ಬಿಟ್ಟು ಒಂದಾಗಿದ್ದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಧಾನಿ ಮೋದಿ ಕರೆ ನೀಡಿದರು.
"ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿದೆ. ದೇಶವು ಹೆಚ್ಚು ದುರ್ಬಲವಾದಷ್ಟು, ಅದು ಹೆಚ್ಚು ಬಲಗೊಳ್ಳುತ್ತದೆ. 'ಜಬ್ ಕಾಂಗ್ರೆಸ್ ಮಜ್ಬೂತ್ ಹೋಗಿ, ದೇಶ್ ಮಜ್ಬೂರ್ ಹೋ ಜಾಯೇಗಾ'. ಆ ಪಕ್ಷವು ವಿವಿಧ ಜಾತಿಗಳ ನಡುವೆ ಒಡಕು ಸೃಷ್ಟಿಸುತ್ತದೆ. ಅದು ನಮ್ಮವರನ್ನು ಎಂದಿಗೂ ಒಗ್ಗೂಡಲು ಬಿಡುವುದಿಲ್ಲ. ಎಸ್‌ಸಿಗಳ ಹಕ್ಕುಗಳನ್ನು ಅದು ಕಸಿದುಕೊಳ್ಳುತ್ತದೆ. ಇದು ಆ ಪಕ್ಷದ ಪಿತೂರಿ ಎಂದರು.
ಕರ್ನಾಟಕದಲ್ಲಿ 'ಮದ್ಯ' ಲೂಟಿ:ಕಾಂಗ್ರೆಸ್ ಎಲ್ಲಿ ಸರ್ಕಾರ ರಚಿಸುತ್ತದೆಯೋ, ಆ ರಾಜ್ಯವು 'ಕುಟುಂಬ'ವೊಂದರ ಎಟಿಎಂ ಆಗಿ ಕೆಲಸ ಮಾಡುತ್ತದೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಇದಕ್ಕೆ ಉದಾಹರಣೆ. ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕದಲ್ಲಿ 700 ಕೋಟಿ ರೂಪಾಯಿ ಅಕ್ರಮ ನಡೆಸಿದ್ದಾರೆ. ಒಂದು ವೇಳೆ ಆ ಪಕ್ಷ ಮಹಾರಾಷ್ಟ್ರದಲ್ಲಿ ಗೆದ್ದರೆ, ಎಷ್ಟು ಲೂಟಿ ಮಾಡಬಹುದು ಯೋಚಿಸಿ ಎಂದು ಹೇಳಿದರು.
ಇದನ್ನೂ ಓದಿ:ವಯನಾಡು ಪುನರ್ವಸತಿಗೆ ಕೇಂದ್ರದ ನೆರವಿನ ಕೊರತೆಯಾಗಿದೆ; ಕೇರಳ ಸಿಎಂ