ನವದೆಹಲಿ: ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಪ್ರಧಾನಿ ಜಮ್ಮು ಮತ್ತು ಕಾಶ್ಮೀರ ಜನತೆಗೆ ಕರೆ ನೀಡಿದ್ದಾರೆ. ಕಣಿವೆ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಾಗೂ ಅಂತಿಮ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ. ಬೆಳಗ್ಗೆ 11 ಗಂಟೆವರೆಗಿನ ಪ್ರಾಥಮಿಕ ಮಾಹಿತಿಗಳ ಪ್ರಕಾರ ಸುಮಾರು ಶೇ 28.12ರಷ್ಟು ಮತದಾನವಾಗಿದೆ ಎಂದು ಚುನಾವನಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.
ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಮತದಾರರು ಮುಂದೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಮತದಾರರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಮಂಗಳವಾರ ಆರಂಭಗೊಂಡಿದ್ದು, ಚಳಿಗಾಲದ ರಾಜಧಾನಿ ಜಮ್ಮು ಸೇರಿದಂತೆ ಏಳು ಜಿಲ್ಲೆಗಳ 40 ಸ್ಥಾನಗಳಲ್ಲಿ ವೋಟಿಂಗ್ ಬಿರುಸಿನಿಂದ ಸಾಗಿದೆ. 39.18 ಲಕ್ಷಕ್ಕೂ ಹೆಚ್ಚು ಅರ್ಹ ಮತದಾರರು 415 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ಮತಯಂತ್ರದಲ್ಲಿ ಭದ್ರಗೊಳಿಸುತ್ತಿದ್ದಾರೆ.
ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲಾ ಮತದಾರರು ಮುಂದೆ ಬಂದು ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ ಎಂದು ಮೋದಿ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘‘ಮೊದಲ ಬಾರಿಗೆ ಮತದಾನ ಮಾಡಲಿರುವ ಯುವ ಸ್ನೇಹಿತರನ್ನು ಹೊರತುಪಡಿಸಿ, ಮಹಿಳಾ ಶಕ್ತಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಪ್ರಧಾನಿ ಹೇಳಿದ್ದಾರೆ.
ಬಿಗಿ ಭದ್ರತೆ ನಡುವೆ ಮತದಾನ:ಕೊನೆ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿರುವ 40 ಕ್ಷೇತ್ರಹಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಉತ್ತರ ಕಾಶ್ಮೀರದ ಮೂರು ಗಡಿ ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದೆ. ಬಾರಾಮುಲ್ಲಾ, ಉರಿ, ರಫಿಯಾಬಾದ್, ಪಟ್ಟನ್, ಗುಲ್ಮಾರ್ಗ್, ಸೋಪೋರ್, ಮತ್ತು ವಗೂರಾ-ಕ್ರೀರಿ (ಬಾರಾಮುಲ್ಲಾ ಜಿಲ್ಲೆ), ಕುಪ್ವಾರಾ, ಕರ್ನಾಹ್, ಟ್ರೆಹ್ಗಾಮ್, ಹಂದ್ವಾರಾ, ಲೋಲಾಬ್ ಮತ್ತು ಲ್ಯಾಂಗೇಟ್ (ಕುಪ್ವಾರಾ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳು ಚುನಾವಣೆ ನಡೆಯಲಿವೆ. ಬಂಡಿಪೋರಾ, ಸೋನಾವರಿ ಮತ್ತು ಗುರೇಜ್ (ಬಂಡಿಪೋರಾ ಜಿಲ್ಲೆ) ಕ್ಷೇತ್ರಗಳಲ್ಲಿ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಈ 16 ಕ್ಷೇತ್ರಗಳಲ್ಲಿ ಒಟ್ಟು 202 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಉಧಂಪುರ, ಸಾಂಬಾ ಮತ್ತು ಕಥುವಾ ಜಿಲ್ಲೆಗಳು ಸೇರಿದಂತೆ ಜಮ್ಮು ಪ್ರದೇಶದ 24 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನ ಮುಂದುವರೆದಿದೆ. ಚುನಾವಣೆಯ ಹಿಂದಿನ ಹಂತಗಳಲ್ಲಿ ಅತ್ಯುತ್ತಮ ಮತದಾನವಾಗಿದೆ. ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದಲ್ಲಿ ಶೇ 61.38 ಹಾಗೂ ಸೆಪ್ಟೆಂಬರ್ 25 ರಂದು ನಡೆದ ಎರಡನೇ ಹಂತದಲ್ಲಿ ಶೇ 57.31ರಷ್ಟು ಮತದಾನವಾಗಿತ್ತು. ಅಕ್ಟೋಬರ್ 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಇದನ್ನು ಓದಿ:ಕಾಶ್ಮೀರ ಮೂರನೇ ಹಂತದ ಚುನಾವಣೆ: ಮಂಗಳವಾರ 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ - Jammu and Kashmir assembly election
ವಿಶ್ವ ಸಸ್ಯಾಹಾರಿ ದಿನ: ಪ್ರಪಂಚದಲ್ಲಿ ಎಷ್ಟು ಬಗೆಯ ಸಸ್ಯಾಹಾರಿಗಳಿದ್ದಾರೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ - World Vegetarian Day