ಕೊಯಮತ್ತೂರ್(ತಮಿಳುನಾಡು): ಉದ್ಯೋಗಿಗಳು ಕೇವಲ ಸಂಸ್ಥೆಯಲ್ಲಿ ದುಡಿಯುವ ವರ್ಗವಲ್ಲ. ಅವರು ಸಂಸ್ಥೆಯ ಲಾಭದಲ್ಲೂ ಭಾಗೀದಾರರು ಎಂದು ಐಟಿ ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ 14.5 ಕೋಟಿ ರೂ ಮೊತ್ತದ ಬೃಹತ್ ಬೋನಸ್ ನೀಡಿದೆ.
ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿ ಮುಖ್ಯ ಕಚೇರಿ ಹೊಂದಿರುವ ಕೊವಯಿ.ಕಾಮ್ (Kovai.co) ಈ ಬಂಪರ್ ಆಫರ್ ಅನ್ನು ತನ್ನ ಸಿಬ್ಬಂದಿಗೆ ನೀಡಿದೆ. ಇಂಗ್ಲೆಂಡ್ ಮತ್ತು ಚೆನ್ನೈನಲ್ಲಿ ಬ್ರ್ಯಾಂಚ್ ಕಚೇರಿ ಹೊಂದಿರುವ ಸಂಸ್ಥೆಯಲ್ಲಿ ಒಟ್ಟು 260 ಸಿಬ್ಬಂದಿ ಇದ್ದಾರೆ. ಇದರಲ್ಲಿ 140 ಉದ್ಯೋಗಿಗಳಿಗೆ ಅಂದರೆ, ಸಂಸ್ಥೆಯಲ್ಲಿ ಕಳೆದ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಭಾರೀ ಮೊತ್ತದ ಬೋನಸ್ ನೀಡಲು ನಿರ್ಧರಿಸಿ, ಸುದ್ದಿಯಾಗಿದೆ.
'ಟುಗೆದರ್ ವಿ ಗ್ರೋ' (ಒಟ್ಟಾಗಿ ನಾವು ಬೆಳೆಯೋಣ) ಎಂಬ ಯೋಜನೆ ಅಡಿಯಲ್ಲಿ 2022 ಡಿ.21ಕ್ಕೆ ಮುಂಚೆ ಸೇರಿದ ಮೂರು ವರ್ಷ ಸೇವೆ ಪೂರೈಸಿದ ಉದ್ಯೋಗಿಗಳಿಗೆ ತಮ್ಮ ವಾರ್ಷಿಕ ವೇತನದಲ್ಲಿ ಶೇ 50ರಷ್ಟನ್ನು ಬೋನಸ್ ಆಗಿ ನೀಡಲು ಸಂಸ್ಥೆ ನಿರ್ಧರಿಸಿದೆ. ಮೊದಲ ಹಂತದಲ್ಲಿ 80ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಈ ಬೋನಸ್ ಹಣವನ್ನು ಜನವರಿ ತಿಂಗಳ ವೇತನದಲ್ಲಿ ನೀಡಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸರವಣಕುಮಾರ್ ಮಾತನಾಡಿ, "ಸಂಸ್ಥೆಯ ಬೆಳವಣಿಗೆ ಮತ್ತು ಲಾಭಕ್ಕೆ ಕೊಡುಗೆ ನೀಡಿದ ಉದ್ಯೋಗಿಗಳನ್ನು ಪ್ರಶಂಸಿಸಬೇಕು ಎಂಬ ವಿಚಾರದಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ಸಂಸ್ಥೆಯ ಸಂಪತ್ತನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಕು ಎಂಬುದು ನನ್ನ ದೀರ್ಘಕಾಲದ ಕನಸು" ಎಂದು ಹೇಳಿದ್ದಾರೆ.