ಹೈದರಾಬಾದ್: ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಹೀಗೆ ಕುಟುಂಬಗಳನ್ನು ಗೌರವಿಸುವ ಮತ್ತು ಸಮಾಜಕ್ಕೆ ಅವುಗಳ ಮಹತ್ವವನ್ನು ತಿಳಿಸುವುದಕ್ಕೆ ಪ್ರತಿ ವರ್ಷ ಮೇ.15 ರಂದು ಅಂತಾರಾಷ್ಟ್ರೀಯ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ. 'ಕುಟುಂಬಗಳು ಮತ್ತು ಹವಾಮಾನ ಬದಲಾವಣೆ' ಎಂಬುದು ಈ ವರ್ಷದ ಥೀಮ್ ಆಗಿದೆ.
'ಕುಟುಂಬ' ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ, ಅದು ಮಗುವಾಗಿರಲಿ ಅಥವಾ ವಯಸ್ಕರಾಗಿರಲಿ. ಕುಟುಂಬವು ನಮ್ಮ ಇಡೀ ಜೀವನವನ್ನು ನಿರ್ಮಿಸುವ ಅಡಿಪಾಯವಾಗಿದೆ. ನಮ್ಮನ್ನು ಪೋಷಿಸುವ ಮತ್ತು ಉನ್ನತೀಕರಿಸುವ ಹಾಗೂ ನಮ್ಮನ್ನು ಅತ್ಯುತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುವ ಬೆಂಬಲಿಸುವ ಭಾವನಾತ್ಮಕವಾಗಿ ಆರೋಗ್ಯಕರ ಕುಟುಂಬ ಸದಸ್ಯರನ್ನು ಹೊಂದಿದ್ದರೆ ಅಂಥವರು ಅದೃಷ್ಟವಂತರು.
ಅಂತಾರಾಷ್ಟ್ರೀಯ ಕುಟುಂಬ ದಿನದ ಇತಿಹಾಸ: 1983 ರಲ್ಲಿ, ಯುರೋಪಿಯನ್ ಎಕನಾಮಿಕ್ ಅಂಡ್ ಸೋಷಿಯಲ್ ಕೌನ್ಸಿಲ್ ಮತ್ತು ಕಮಿಷನ್ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ ವಿಶ್ವಸಂಸ್ಥೆಗೆ (ಯುಎನ್) ಕುಟುಂಬ ವಿಷಯಗಳ ಮೇಲೆ ಗಮನ ಹರಿಸುವಂತೆ ಒತ್ತಾಯಿಸಿತು. ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಪ್ರಪಂಚದಾದ್ಯಂತದ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯುಎನ್ ಒಪ್ಪಿಕೊಂಡಿತ್ತು. ನಂತರ 1993ರಲ್ಲಿ ಮೇ.15 ಅನ್ನು ಅಂತಾರಾಷ್ಟ್ರೀಯ ಕುಟುಂಬ ದಿನವನ್ನಾಗಿ ಘೋಷಿಸಿತು.
ಹವಾಮಾನ ಬದಲಾವಣೆಯಿಂದ ಉಂಟಾದ ಮಾಲಿನ್ಯವು ಕುಟುಂಬಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಹವಾಮಾನ ಬದಲಾವಣೆಯಿಂದ ಸೃಷ್ಟಿಯಾಗುವ ಚಂಡಮಾರುತಗಳು, ಬರಗಾಲಗಳು ಮತ್ತು ಪ್ರವಾಹಗಳಂತಹವುಗಳು ಆಗಾಗ ಜನರನ್ನು ಸ್ಥಳಾಂತರಿಸಲು ಮತ್ತು ತಮ್ಮ ಜೀವನ ವಿಧಾನಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇಂತಹ ಘಟನೆಗಳು ಕೃಷಿ ಉತ್ಪಾದಕತೆ ಮತ್ತು ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಮೂಲಕ ಹಸಿವು ಮತ್ತು ಅಸ್ಥಿರತೆಯನ್ನು ಹೆಚ್ಚಿಸುತ್ತವೆ.
ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಕೃಷಿ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡುವುದು ಮತ್ತು ಅವುಗಳಿಗೆ ಹೊಂದಿಕೊಳ್ಳುವುದು ಸದ್ಯದ ಪರಿಸ್ಥಿಯಲ್ಲಿ ಕಷ್ಟವಾಗಿದೆ. ಶಿಕ್ಷಣ, ಬಳಕೆಯ ಮಾದರಿಗಳ ಬದಲಾವಣೆ ಮತ್ತು ಬದ್ಧತೆ ಮೂಲಕ ಕುಟುಂಬಗಳು ಸಬಲೀಕರಣಗೊಳ್ಳುವುದು ಅರ್ಥಪೂರ್ಣ ಮತ್ತು ಯಶಸ್ವಿ ಹವಾಮಾನ ಕ್ರಿಯೆಗೆ ಅತ್ಯಗತ್ಯ.