ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ನದಿಗಳಲ್ಲಿನ ಡಾಲ್ಫಿನ್ಗಳ ಸಮೀಕ್ಷೆ ನಡೆಸಲಾಗಿದೆ. ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳಲ್ಲಿ ಡಾಲ್ಫಿನ್ಗಳ ಮೊದಲ ಅಂದಾಜು ಸಮೀಕ್ಷೆ ನಡೆಸಿದ್ದು, ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗಂಗಾ-ಬ್ರಹ್ಮಪುತ್ರ-ಮೇಘನಾ ನದಿ ವ್ಯವಸ್ಥೆ ಮತ್ತು ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್‌ನಾದ್ಯಂತ ಹರಡಿರುವ ಅದರ ಉಪನದಿಗಳಲ್ಲಿ ಡಾಲ್ಫಿನ್ಗಳು ಕಂಡುಬರುತ್ತವೆ. ಗಂಗಾ ನದಿ ಡಾಲ್ಫಿನ್ನ ಹತ್ತಿರದ ಸಂಬಂಧಿಯಾದ ಸಿಂಧೂ ನದಿ ಡಾಲ್ಫಿನ್ಗಳು ಸಣ್ಣ ಪ್ರಮಾಣದಲ್ಲಿ ಭಾರತದ ಸಿಂಧೂ ನದಿ ವ್ಯವಸ್ಥೆಯಲ್ಲಿ ಕಂಡುಬರುತ್ತವೆ.
"ಪ್ರಾಜೆಕ್ಟ್ ಡಾಲ್ಫಿನ್ ಅಡಿಯಲ್ಲಿ, ನಾವು ನದಿಗಳಲ್ಲಿನ ಡಾಲ್ಫಿನ್ಗಳ ಅಂದಾಜು ಎಣಿಕೆಯನ್ನು ಪೂರ್ಣಗೊಳಿಸಿದ್ದೇವೆ. ಈ ಮಾದರಿಯ ಸಮೀಕ್ಷೆಯು ವಿಶ್ವದಲ್ಲೇ ಮೊದಲನೆಯದು. ಎರಡು ವರ್ಷಗಳ ಕಾಲ ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳ 8,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈಲ್ಡ್ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದ ಈ ಸಮೀಕ್ಷೆಯಲ್ಲಿ ಗಂಗಾ ನದಿ ಡಾಲ್ಫಿನ್ ಮತ್ತು ಸಿಂಧೂ ನದಿ ಡಾಲ್ಫಿನ್ ಎಂಬ ಎರಡು ಜಾತಿಗಳನ್ನು ಎಣಿಕೆ ಮಾಡಲಾಗಿದೆ. ಇದು ಭವಿಷ್ಯದ ಮೌಲ್ಯಮಾಪನಕ್ಕಾಗಿ ಭಾರತದಲ್ಲಿನ ನದಿ ಡಾಲ್ಫಿನ್ಗಳ ಬೇಸ್‌ಲೈನ್ ಸಂಖ್ಯೆಯನ್ನು ಒದಗಿಸುತ್ತದೆ.