ನವದೆಹಲಿ: ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಜ್ಯಸಭೆಯಲ್ಲಿ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಈ ಸಂಬಂಧ ಇಂಡಿಯಾ ಮೈತ್ರಿಕೂಟ ಸದಸ್ಯರು ಔಪಚಾರಿಕವಾಗಿ ಮೇಲ್ಮನೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರತಿಪಕ್ಷಗಳ ಆರೋಪವೇನು?: ಸಭಾಪತಿ ಧನ್ಕರ್ ಮೇಲ್ಮನೆಯ ಕಾರ್ಯಕಲಾಪಗಳನ್ನು ತೀರಾ ಪಕ್ಷಪಾತದಿಂದ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದರ ಹೊರತಾಗಿ ತಮಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳಿವೆ. ರಾಜ್ಯಸಭೆಯ ಕಲಾಪಗಳನ್ನು ಪಕ್ಷಪಾತದಿಂದ ನಿರ್ವಹಿಸುವುದರಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯು ದುರ್ಬಲಗೊಳ್ಳುತ್ತದೆ ಎಂದು ಕಾಂಗ್ರೆಸ್ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಬ್ಲಾಕ್ನ ಎಲ್ಲಾ ಪಕ್ಷಗಳು ಒಟ್ಟಾಗಿ ನಿರ್ಣಯವನ್ನು ಮಂಡಿಸಿವೆ.
ನಿರ್ಣಯಕ್ಕೆ ಸಹಿ ಹಾಕಿದ ವಿರೋಧ ಪಕ್ಷದ ಸಂಸದರು ಇಂಥ ಪರಿಸ್ಥಿತಿ ಉದ್ಭವಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಸಂಸದೀಯ ಪ್ರಜಾಪ್ರಭುತ್ವದ ರಕ್ಷಣೆಗೆ ಇದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಸುಮಾರು 60 ಸಂಸದರು ಸಹಿ ಮಾಡಿದ ಈ ಪ್ರಸ್ತಾಪವನ್ನು ಸಂವಿಧಾನದ 67- ಬಿ ವಿಧಿಯಡಿ ಸಲ್ಲಿಸಲಾಗಿದೆ.
ಈ ವಿಷಯವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ರಣದೀಪ್ ಸಿಂಗ್ ಸುರ್ಜೆವಾಲಾ ಭ್ರಷ್ಟಾಚಾರ, ಹಣದುಬ್ಬರ ಮತ್ತು ನಿರುದ್ಯೋಗದಂಥ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯದಂತೆ ಆಡಳಿತ ಪಕ್ಷವು ಸಂಸತ್ತಿನಲ್ಲಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.