ಜಮ್ಮು:ಐಎನ್ಡಿಐಎ ಮೈತ್ರಿಕೂಟವನ್ನು ಕೇವಲ ಲೋಕಸಭಾ ಚುನಾವಣೆಗಾಗಿ ಮಾತ್ರ ಮಾಡಲಾಗಿದ್ದರೆ ಅದನ್ನು ಇವಾಗ ಮುಚ್ಚಿ ಬಿಡುವುದು ಉತ್ತಮ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ. ಐಎನ್ಡಿಐಎ ಮೈತ್ರಿಕೂಟ ಎಷ್ಟು ಕಾಲದವರೆಗೆ ಮುಂದುವರಿಯಬೇಕೆಂಬುದರ ಬಗ್ಗೆ ಯಾವುದೇ ಕಾಲಮಿತಿ ಹಾಕಿಕೊಂಡಿರಲಿಲ್ಲ ಎಂಬುದನ್ನು ಉಲ್ಲೇಖಿಸಿರುವ ಅವರು, ಮೈತ್ರಿಕೂಟದ ಅಜೆಂಡಾ ಮತ್ತು ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ದೆಹಲಿ ವಿಧಾನಸಭಾ ಚುನಾವಣೆ ಮುಗಿದ ನಂತರ ಮೈತ್ರಿಕೂಟದ ಎಲ್ಲಾ ಸದಸ್ಯರ ಸಭೆ ಕರೆಯಲಿ. ಈ ಮೈತ್ರಿಕೂಟವನ್ನು ಲೋಕಸಭಾ ಚುನಾವಣೆಗಾಗಿ ಮಾತ್ರ ಮಾಡಿಕೊಂಡಿದ್ದರೆ ಅದನ್ನು ಕೊನೆಗೊಳಿಸಿ. ನಾವು ಪ್ರತ್ಯೇಕವಾಗಿ ಮುಂದುವರಿಯುತ್ತೇವೆ. ಆದರೆ ಒಂದೊಮ್ಮೆ ವಿಧಾನಸಭಾ ಚುನಾವಣೆಗಳಿಗಾಗಿಯೂ ಈ ಮೈತ್ರಿಕೂಟ ಮಾಡಿಕೊಳ್ಳಲಾಗಿದೆ ಎಂದಾದರೆ ನಾವು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ" ಎಂದು ಒಮರ್ ಹೇಳಿದರು.
ಐಎನ್ಡಿಐಎ ಮೈತ್ರಿಕೂಟವು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು ಎಂಬ ಆರ್ಜೆಡಿ ನಾಯಕನ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಉತ್ತರಿಸುತ್ತಿದ್ದರು.
"ನನಗೆ ನೆನಪಿರುವಂತೆ, ಮೈತ್ರಿಕೂಟಕ್ಕೆ ಯಾವುದೇ ಕಾಲಮಿತಿ ಹಾಕಿರಲಿಲ್ಲ. ಆದರೆ ಸದ್ಯ ಐಎನ್ಡಿಐಎ ಮೈತ್ರಿಕೂಟದ ಯಾವುದೇ ಸಭೆ ನಡೆಯುತ್ತಿಲ್ಲ" ಎಂದು ಅವರು ಹೇಳಿದರು.