ಲಖನೌ (ಉತ್ತರ ಪ್ರದೇಶ): ರಾಮ ನಗರಿ ಅಯೋಧ್ಯೆಯ ಭದ್ರತೆಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕೇಂದ್ರ ಸ್ಥಾಪನೆಯ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯವು ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅಯೋಧ್ಯೆಯಲ್ಲಿ ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆ (ಯುಪಿಎಸ್ಎಸ್ಎಫ್), ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮತ್ತು ಪ್ರಾದೇಶಿಕ ಸಶಸ್ತ್ರ ಪಡೆಯ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ದೇಶ ಮತ್ತು ವಿದೇಶಗಳಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಜೊತೆಗೆ ವಿವಿಐಪಿಗಳ ಆಗಮನವೂ ಅಧಿಕವಾಗಿದೆ. ಆದ್ದರಿಂದ ಅಯೋಧ್ಯೆ ಭದ್ರತೆಯ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಸೂಕ್ಷ್ಮತೆಯಿಂದ ಪರಿಶೀಲಿಸುತ್ತಿವೆ. ಇದೇ ಕಾರಣಕ್ಕೆ ರಾಮ ಮಂದಿರದ ಭದ್ರತೆಯ ಹೊಣೆಯನ್ನು ಯುಪಿ ವಿಶೇಷ ಭದ್ರತಾ ಪಡೆಗೆ ವಹಿಸಲಾಗಿದೆ. ಜೊತೆಗೆ ಎಟಿಎಸ್ ಬೆಟಾಲಿಯನ್‌ಯನ್ನೂ ಒದಗಿಸಲಾಗಿದೆ.
ಅಯೋಧ್ಯೆಯಲ್ಲಿ ಅಧಿಕಾರಿಗಳು ಮೊಕ್ಕಾಂ:ಇದೀಗ ಅಯೋಧ್ಯೆಯಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆ ಸಂಬಂಧ ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ಎಸ್‌ಜಿ ಕೇಂದ್ರ ತೆರೆಯಲು ಸಹ ಕೇಂದ್ರ ಸರ್ಕಾರ ನಿರ್ಧರಿಸಿದೆ. ಎನ್‌ಎಸ್‌ಜಿ ಕೇಂದ್ರ ಕಚೇರಿಯ ಹಲವು ಅಧಿಕಾರಿಗಳು ಈಗಾಗಲೇ ಅಯೋಧ್ಯೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಇಲ್ಲಿನ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯಲ್ಲೂ ತೊಡಗಿದ್ದಾರೆ. ಇದರ ಬಳಿಕ ಅಧಿಕಾರಿಗಳು ಗೃಹ ಸಚಿವಾಲಯಕ್ಕೆ ಎನ್‌ಎಸ್‌ಜಿ ಕೇಂದ್ರದ ಸಂಬಂಧ ತಮ್ಮ ವರದಿ ಸಲ್ಲಿಸಲಿದ್ದಾರೆ. ಅಧಿಕಾರಿಗಳ ಶಿಫಾರಸ್ಸಿನ ಆಧಾರದ ಮೇಲೆ ಗೃಹ ಸಚಿವಾಲಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಎನ್‌ಎಸ್‌ಜಿ ಅನುಕೂಲಗಳು:ಅಯೋಧ್ಯೆಯಲ್ಲಿ ಎನ್‌ಎಸ್‌ಜಿ ಕೇಂದ್ರ ತೆರೆಯುವುದರಿಂದ ಅನೇಕ ಭದ್ರತಾ ಅನುಕೂಲಗಳು ಆಗಲಿವೆ. ತುರ್ತು ಪರಿಸ್ಥಿತಿಯಲ್ಲಿ ಭದ್ರತಾ ಬಲದ ಅಗತ್ಯವಿದ್ದರೆ, ವಾರಣಾಸಿ, ಗೋರಖ್‌ಪುರ ಮತ್ತು ಮಥುರಾಕ್ಕೂ ಅಯೋಧ್ಯೆ ಕೇಂದ್ರದಿಂದ ತ್ವರಿತಗತಿಯಲ್ಲಿ ಎನ್‌ಎಸ್‌ಜಿ ತಂಡ ತಲುಪಲು ಸಾಧ್ಯವಾಗುತ್ತದೆ. ವರ್ಷವಿಡೀ ಈ ಧಾರ್ಮಿಕ ಸ್ಥಳಗಳಲ್ಲಿ ಭಕ್ತರು ಮತ್ತು ವಿವಿಐಪಿಗಳ ನಿರಂತರ ಹರಿವು ಇರುತ್ತದೆ. ಆದ್ದರಿಂದ ಭದ್ರತಾ ದೃಷ್ಟಿಯಿಂದ ಇದೊಂದು ದೊಡ್ಡ ನಿರ್ಧಾರವಾಗಲಿದೆ.
ಇದನ್ನೂ ಓದಿ:ಕಣಿವೆಯಲ್ಲಿ ಮತ್ತೆ ಗುಂಡಿನ ಚಕಮಕಿ: ಜಮ್ಮುವಿನ ಕಥುವಾದಲ್ಲಿ ಶಂಕಿತ ಪಾಕ್ ಉಗ್ರನನ್ನು ಹೆಡೆಮುರಿ ಕಟ್ಟಿದ ಭದ್ರತಾ ಪಡೆ