ಕರ್ನಾಟಕ

karnataka

ETV Bharat / bharat

ಇಂಗ್ಲಿಷ್​​​​​​ನಲ್ಲಿ ಮಾತನಾಡುವುದೇ ಶ್ರೇಷ್ಠ ಎಂಬ ಅಭಿಪ್ರಾಯ ತಪ್ಪು: ಶೈಲಜಾ ಕಿರಣ್ - WORLD TELUGU WRITERS CONFERENCE

ವಿಶ್ವ ತೆಲುಗು ಲೇಖಕರ ಸಮ್ಮೇಳನದಲ್ಲಿ ಮಾತನಾಡಿದ ಮಾರ್ಗದರ್ಶಿ ಚಿಟ್​ಫಂಡ್​ ಎಂಡಿ ಶೈಲಜಾ ಕಿರಣ್, ಇನ್ಮುಂದೆ ರಾಮೋಜಿ ರಾವ್ ಅವರ ಸ್ಮರಣಾರ್ಥ ನಾವು ತೆಲುಗಿನಲ್ಲಿ ಶುಭೋದಯಂ ಎಂದು ಹೇಳೋಣ ಎಂದು ಕರೆ ನೀಡಿದರು.

In memory of Ramoji Rao let's say Subhodayam Margadarshi MD Shailaja Kiran
ಆರನೇ ವಿಶ್ವ ತೆಲುಗು ಕವಿಗಳ ಸಮ್ಮೇಳವನ್ನು ಉದ್ಘಾಟಿಸಿದ ಕ್ಷಣ (ETV Bharat)

By ETV Bharat Karnataka Team

Published : Dec 28, 2024, 1:12 PM IST

ವಿಜಯವಾಡ (ಆಂಧ್ರ ಪ್ರದೇಶ):''ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ತೆಲುಗು ಭಾಷೆ ಕೂಡ ಒಂದಾಗಿದ್ದು, ನಾಲ್ಕನೇ ಸ್ಥಾನದಲ್ಲಿದೆ'' ಎಂದು ಮಾರ್ಗದರ್ಶಿ ಚಿಟ್​ಫಂಡ್​ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ಹೇಳಿದರು.

ಮುಂದಿನ ಪೀಳಿಗೆಗೆ ಮಾತೃಭಾಷೆಯನ್ನು ತಿಳಿಸುವ ಉದ್ದೇಶದಿಂದ ವಿಜಯವಾಡದಲ್ಲಿ ಆರನೇ ವಿಶ್ವ ತೆಲುಗು ಕವಿಗಳ ಸಮ್ಮೇಳನ ಆರಂಭಗೊಂಡಿದ್ದು, ತೆಲುಗು ತಾಯಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

''ಇಂಗ್ಲಿಷ್​​ನಲ್ಲಿ ಮಾತನಾಡುವುದೇ ಶ್ರೇಷ್ಠ ಎಂಬ ಅಭಿಪ್ರಾಯ ತಪ್ಪು. ತೆಲುಗು ದೇಶದ ನಾಲ್ಕನೇ ಅತಿ ಹೆಚ್ಚು ಮಾತನಾಡುವ ಭಾಷೆ. ನಮ್ಮ ತೆಲುಗು ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ 14ನೇ ಸ್ಥಾನದಲ್ಲಿದೆ. ಕವಿತ್ರಯಂ ಮುಂತಾದ ಕವಿಗಳಿಂದಾಗಿ ತೆಲುಗು ಭಾಷೆ ಎಲ್ಲರ ಬಾಯಲ್ಲೂ ಉಳಿದಿದೆ. ಭಾರತದಲ್ಲಿ ತೆಲುಗು ಅತ್ಯುತ್ತಮ ಭಾಷೆ ಎಂದು ಶ್ರೀಕೃಷ್ಣದೇವರಾಯ, ರವೀಂದ್ರನಾಥ ಟ್ಯಾಗೋರ್ ಅವರು ಈ ಭಾಷೆ ಮತ್ತು ಸಂಗೀತವನ್ನು ಮೆಚ್ಚಿದ್ದರು'' ಎಂದು ಶೈಲಜಾ ಕಿರಣ್ ಅವರು ಹೇಳಿದರು.

''ರಾಮೋಜಿ ರಾವ್ ಅವರು ತೆಲುಗು ಭಾಷೆ ಮತ್ತು ತೆಲುಗು ರಾಜ್ಯಗಳ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ನಾವು ಬೆಳಗ್ಗೆ ಅವರಿಗೆ ತೆಲುಗಿನಲ್ಲಿಯೇ ಶುಭೋದಯಂ ಎಂದು ಹೇಳುತ್ತಿದ್ದೆವು. ರಾಮೋಜಿ ರಾವ್ ಅವರು ನಮ್ಮ ಮನೆಯಲ್ಲಿ ಮಕ್ಕಳು ತೆಲುಗು ಮಾತನಾಡುವಂತೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅವರ ಸ್ಮರಣಾರ್ಥ ನಾವೆಲ್ಲರೂ ಇನ್ಮುಂದೆ ‘ಶುಭೋದಯಂ’ ಎಂದು ಹೇಳೋಣ. ನಾವು ನಮ್ಮದು ಎಂದು ಭಾವಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಹಾಗೆಯೇ ತೆಲುಗು ಭಾಷೆ ನಮ್ಮೆಲ್ಲರಿಗೂ ಸೇರಿದ್ದು, ಬಹಳ ಮುಖ್ಯವಾದದ್ದು ಕೂಡ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕು'' ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು, 'ತೆಲುಗು ಭಾಷೆಯನ್ನು ಉಳಿಸೋಣ', ಸ್ವಾಭಿಮಾನ ಹೆಚ್ಚಿಸೋಣ ಎಂದರು.

ರಾಮೋಜಿ ರಾವ್ ತೆಲುಗು ತಾಯಿಯ ಪ್ರೀತಿಯ ಮಗು ಮತ್ತು ತೆಲುಗು ಭಾಷೆ ಮತ್ತು ಸಂಪ್ರದಾಯಗಳ ಸಂರಕ್ಷಣೆಗಾಗಿ ಹುಟ್ಟಿದ ಯೋಧ. ನಮ್ಮ ಸಂಸ್ಕೃತಿಯನ್ನು ಕಾಪಾಡಲು ತಮ್ಮ ಕೊನೆಯ ಉಸಿರು ಇರುವವರೆಗೂ ಅವರು ಹೋರಾಡಿದರು ಎಂದು ರಾಮೋಜಿ ರಾವ್ ಅವರಿಗಿದ್ದ ತೆಲುಗು ಪ್ರೀತಿಯನ್ನು ನಿವೃತ್ತ ನ್ಯಾಯಮೂರ್ತಿಗಳು ಬಣ್ಣಿಸಿದರು.

ವಿಶ್ವ ತೆಲುಗು ಲೇಖಕರ ಸಮ್ಮೇಳನದ ಗೌರವಾಧ್ಯಕ್ಷ ಹಾಗೂ ಶಾಸಕ ಮಂಡಳಿ ಬುದ್ಧಪ್ರಸಾದ್ ಮಾತನಾಡಿ, ಲೇಖಕರು ಯಾವುದೇ ರಾಜಕೀಯ ಪಕ್ಷಪಾತವಿಲ್ಲದೇ ತೆಲುಗು ನಾಡಿನ ಪ್ರಗತಿ ಮತ್ತು ಅಭಿವೃದ್ಧಿಗೆ ಮುಡಿಪಾಗಿ ನಿಂತಿದ್ದಾರೆ. ಮಾತೃಭಾಷೆ ಎಂದು ಪರಿಗಣಿಸಲ್ಪಟ್ಟಿರುವ ತೆಲುಗು ಭಾಷೆಯನ್ನು ಉಳಿಸುವುದು ಈ ಕೂಟಗಳ ಮೂಲ ಉದ್ದೇಶ. ತೆಲುಗು ಭಾಷೆಗಾಗಿ ರಾಮೋಜಿ ರಾವ್ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವ ಅಗತ್ಯವಿದೆ. ರಾಮೋಜಿ ರಾವ್ ಜನಜೀವನದಿಂದ ಭಾಷೆ ಮರೆಯಾಗುವುದನ್ನು ಬಯಸದ ದಾರ್ಶನಿಕ ಎಂದು ರಾಮೋಜಿ ರಾವ್ ಅವರ ಭಾಷಾ ಕೊಡುಗೆ ಮತ್ತು ಅವರಿಗಿದ್ದ ಭಾಷಾ ಜ್ಞಾನವನ್ನು ಬಣ್ಣಿಸಿದರು.

ಔಪಚಾರಿಕ ಉದ್ಘಾಟನೆಗೂ ಮುನ್ನ ತೆಲುಗು ತಾಯಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಸುಜನಾ ಚೌಧರಿ, ಮಂಡಳಿ ಬುದ್ಧ ಪ್ರಸಾದ್, ವಿಶ್ವ ಹಿಂದಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಆಚಾರ್ಯ ಯರ್ಲಗಡ್ಡ ಲಕ್ಷ್ಮೀ ಪ್ರಸಾದ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ಎರಡು ದಿನಗಳ ಈ ಕಾರ್ಯಕ್ರಮವು ಕೆ.ಬಿ.ಎನ್. ಕಾಲೇಜು ಆವರಣದಲ್ಲಿ ನಡೆಯುಯುತ್ತಿದ್ದು, ಜಗತ್ತಿನಾದ್ಯಂತ ಸುಮಾರು 1,500 ಕವಿಗಳು, ಬರಹಗಾರರು ಮತ್ತು ಭಾಷಾ ಉತ್ಸಾಹಿಗಳೂ ಭಾಗಿಯಾಗಲಿದ್ದಾರೆ. ಸಮ್ಮೇಳನವು ಪೊಟ್ಟಿ ಶ್ರೀರಾಮುಲು ಸಭಾಂಗಣದಲ್ಲಿ ಚೆರುಕುರಿ ರಾಮೋಜಿ ರಾವ್ ಪ್ರಧಾನ ವೇದಿಕೆ ಸೇರಿದಂತೆ ಮೂರು ಪ್ರಮುಖ ವೇದಿಕೆಗಳನ್ನು ಒಳಗೊಂಡಿದ್ದು, 25ಕ್ಕೂ ಹೆಚ್ಚು ಅಧಿವೇಶನಗಳು, ಕವಿಗೋಷ್ಠಿಗಳು ಮತ್ತು ಸಾಹಿತ್ಯ ಚರ್ಚೆಗಳು ನಡೆಯಲಿವೆ. 800ಕ್ಕೂ ಹೆಚ್ಚು ಭಾಷಾಭಿಮಾನಿಗಳು ಭಾಗವಹಿಸಲಿದ್ದಾರೆ. 1,000 ಕ್ಕೂ ಹೆಚ್ಚು ಪ್ರಸಿದ್ಧ ತೆಲುಗು ಕವಿಗಳ ಭಾವಚಿತ್ರಗಳನ್ನು ಪ್ರದರ್ಶಿಸುವ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಇದನ್ನೂ ಓದಿ:ತಮಿಳುನಾಡಿನ ಹೊಸೂರಿನಲ್ಲಿ ಮಾರ್ಗದರ್ಶಿ ಚಿಟ್​​ಫಂಡ್​ನ 120ನೇ ಶಾಖೆ ಉದ್ಘಾಟಿಸಿದ ಎಂಡಿ ಶೈಲಜಾ ಕಿರಣ್ - MD SAILAJA KIRON

ABOUT THE AUTHOR

...view details