ನವದೆಹಲಿ: 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಕೇವಲ 13 ತಿಂಗಳ ನಂತರ ಪತನಗೊಂಡಿತ್ತು. ಆಗಿನ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಶರದ್ ಪವಾರ್ ಅವರು ದೇಶದ ಅತಿ ಕಡಿಮೆ ಅವಧಿಯ ಸರ್ಕಾರದ ಬಗ್ಗೆ ಕುತೂಹಲಕರ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಪತ್ರಕರ್ತ ನಿಲೇಶ್ ಕುಮಾರ್ ಕುಲಕರ್ಣಿ ಅವರು ಬರೆದಿರುವ 'ಸಂಸದ್ ಭವನ್ ಟು ಸೆಂಟ್ರಲ್ ವಿಸ್ಟಾ: ಪಾಥ್ ಆಫ್ ಡ್ಯೂಟಿ ಆಫ್ ಮೆಮೊರಿಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಹೇಗೆ ಪತನಗೊಂಡಿತು ಎಂಬುದರ ಬಗ್ಗೆ ಈ ಸಂದರ್ಭದಲ್ಲಿ ಪವಾರ್ ದೊಡ್ಡ ಸಂಗತಿಯೊಂದನ್ನು ಬಹಿರಂಗಪಡಿಸಿದರು. ಆ ಸಮಯದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಪವಾರ್ ಮಾತನಾಡಿದರು.
1999ರ ಏಪ್ರಿಲ್ 17ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿತ್ತು. ಆದರೆ ಆ ದಿನ ವಾಜಪೇಯಿ ಸರ್ಕಾರಕ್ಕೆ ಸಿಕ್ಕಿದ್ದು ಕೇವಲ 269 ಮತಗಳು. ಸರ್ಕಾರದ ವಿರುದ್ಧ 270 ಮತಗಳು ಚಲಾವಣೆಯಾಗಿದ್ದವು. ಈ ಕಾರಣದಿಂದಾಗಿ, ಆಗಿನ ಪ್ರಧಾನಿ ವಾಜಪೇಯಿ ರಾಜೀನಾಮೆ ನೀಡಬೇಕಾಯಿತು.
ಈ ಘಟನೆಯ ಬಗ್ಗೆ ಮಾತನಾಡಿದ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, "ನಾನು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರದಲ್ಲಿತ್ತು. ನಾವು ವಿರೋಧ ಪಕ್ಷದಲ್ಲಿದ್ದಾಗ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಈ ನಿರ್ಣಯವನ್ನು ಒಂದು ಮತದಿಂದ ಅಂಗೀಕರಿಸಲಾಯಿತು. ಆದರೆ ನಾನು ಆ ಒಂದು ಮತವನ್ನು ಯಾರಿಂದ ಪಡೆದೆ ಎಂಬುದನ್ನು ಈಗ ಹೇಳುತ್ತಿಲ್ಲ. ಅವಿಶ್ವಾಸ ಗೊತ್ತುವಳಿ ಮಂಡಿಸಿದ ನಂತರ ಚರ್ಚೆಗೆ ಸಮಯವಿತ್ತು. ಆ ಸಮಯದಲ್ಲಿ, ನಾನು ಹೊರಗೆ ಹೋಗಿ ಒಬ್ಬರೊಂದಿಗೆ ಮಾತನಾಡಿ ಹಿಂತಿರುಗಿದೆ. ನಂತರ ಆಡಳಿತ ಪಕ್ಷದ ಒಬ್ಬ ವ್ಯಕ್ತಿಯು ವಿಭಿನ್ನ ನಿರ್ಧಾರ ತೆಗೆದುಕೊಂಡಿದ್ದರಿಂದ ಸರ್ಕಾರವು ಒಂದು ಮತದಿಂದ ಪತನಗೊಂಡಿತು" ಎಂದು ಅವರು ಹೇಳಿದರು.
"ಕುಲಕರ್ಣಿ ತಮ್ಮ ಪುಸ್ತಕದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದಾರೆ. ಆದರೆ ನಾನು ಹೇಳುತ್ತಿರುವಂಥ ಕೆಲ ಘಟನೆಗಳನ್ನು ಪುಸ್ತಕಕ್ಕೆ ಸೇರಿಸಬೇಕಾಗಿದೆ. ಒಂದೊಮ್ಮೆ ನೀವು ಅವುಗಳನ್ನು ಸೇರಿಸಬಯಸಿದರೆ, ನೀವು, ನಾನು ಮತ್ತು ಸಂಜಯ್ ರಾವುತ್ ಒಮ್ಮೆ ಕುಳಿತು ಚರ್ಚೆ ಮಾಡೋಣ. ನಾವು ಯಾವುದೇ ಪಕ್ಷಪಾತವಿಲ್ಲದೆ ನಿಜವಾದ ಚಿತ್ರಣವನ್ನು ಪ್ರಸ್ತುತಪಡಿಸಲು ಪ್ರಯತ್ನಿಸಬಹುದು" ಎಂದು ಮಾಜಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: ಯುಪಿಯಿಂದ ಇಸ್ರೇಲ್ಗೆ 5,600 ಕಾರ್ಮಿಕರ ರವಾನೆ; ಮತ್ತೆ 5,000 ಮಂದಿಯನ್ನು ಕಳುಹಿಸಲು ತಯಾರಿ - UP WORKERS SENT TO ISRAEL