ನವದೆಹಲಿ: ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರು ಶಾಸಕ- ಸಂಸದರಾಗಿ ಸದನಗಳಿಗೆ ಮರಳುವುದು ಹೇಗೆ ಎಂದು ಕೇಳಿರುವ ಸುಪ್ರೀಂಕೋರ್ಟ್ ರಾಜಕೀಯದ ಅಪರಾಧೀಕರಣವು ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಅಪರಾಧಿ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಹೇರುವಂತೆ ಸಲ್ಲಿಕೆ ಮಾಡಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠದ ಮುಂದೆ ಬಂದಿತು. ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವದ ಸವಾಲಿನ ಕುರಿತು ಮೂರು ವಾರಗಳಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗ ತನ್ನ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಇದೇ ವೇಳೆ ಸೂಚಿಸಿತು. ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು 9 ಕ್ಕೆ ಒತ್ತು ನೀಡಿದ ಪೀಠ, ಭ್ರಷ್ಟಾಚಾರ ಅಥವಾ ರಾಜ್ಯ ನಿಷ್ಠೆಯಿಂದ ತಪ್ಪಿತಸ್ಥರೆಂದು ಸಾಬೀತಾದ ಸರ್ಕಾರಿ ನೌಕರನನ್ನು ಒಬ್ಬ ವ್ಯಕ್ತಿಯಾಗಿ ಸೇವೆಯಲ್ಲಿ ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಮಂತ್ರಿಯಾಗಬಹುದು ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತು.
ವಿಚಾರಣೆ ವೇಳೆ, ಪೀಠವು, ಒಮ್ಮೆ ರಾಜಕಾರಣಿಗೆ ಶಿಕ್ಷೆಯಾದರೆ ಮತ್ತು ಶಿಕ್ಷೆಯನ್ನು ಎತ್ತಿಹಿಡಿದರೆ ಸಂಸತ್ತು ಮತ್ತು ಶಾಸಕಾಂಗಕ್ಕೆ ಹೇಗೆ ಮರಳುತ್ತಾರೆ? ಎಂಬುದನ್ನು ಅವರೇ ಉತ್ತರಿಸಬೇಕು ಎಂದಿತು. ರಾಜಕೀಯದಲ್ಲಿ ಅಪರಾಧೀಕರಣವು ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು. ಹಿತಾಸಕ್ತಿಗಳ ಸ್ಪಷ್ಟ ಸಂಘರ್ಷವೂ ಇದರಲ್ಲಿದೆ ಎಂಬುದನ್ನು ಪೀಠವು ಗಮನಿಸಿತು. ಈ ಸಮಸ್ಯೆ ಬಗ್ಗೆ ನಿರ್ಣಯಿಸಲು ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿಯನ್ನು ಕೇಳಿತು.
ಚುನಾವಣಾ ಆಯೋಗ, ಈ ವಿಚಾರದಲ್ಲಿ ತನ್ನ ಅಪ್ಲೈ ಆಫ್ ಮೈಂಡ್ ಉಪಯೋಗಿಸಬೇಕು. ನ್ಯಾಯಾಲಯದ ಮುಂದೆ ಕ್ಯಾನ್ವಾಸ್ ಮಾಡಿದ್ದಕ್ಕಿಂತ ಉತ್ತಮ ಪರಿಹಾರ ಕಂಡುಕೊಂಡುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು. ಕಾಲಕಾಲಕ್ಕೆ ಸುಪ್ರೀಂ ಕೋರ್ಟ್‌ನ ಆದೇಶಗಳು ಮತ್ತು ಹೈಕೋರ್ಟ್‌ನ ಮೇಲ್ವಿಚಾರಣೆಯ ಹೊರತಾಗಿಯೂ ಶಾಸಕರ ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ವಿಜಯ್ ಹಂಸಾರಿಯಾ ಪ್ರತಿಪಾದಿಸಿದರು.
ಶೇ 42 ರಷ್ಟು ಕ್ರಿಮಿನಲ್ ಪ್ರಕರಣಗಳು ಪೆಂಡಿಂಗ್:ಹಾಲಿ ಲೋಕಸಭಾ ಸದಸ್ಯರಲ್ಲಿ ಶೇಕಡಾ 42 ರಷ್ಟು ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದ ಅಮಿಕಸ್ ಕ್ಯೂರಿ, 30 ವರ್ಷಗಳಿಂದ ಪ್ರಕರಣಗಳು ಬಾಕಿ ಉಳಿದಿವೆ ಎಂಬುದನ್ನು ಪೀಠದ ಗಮನಕ್ಕೆ ತಂದರು. ಇನ್ನು ಅರ್ಜಿದಾರ ಉಪಾಧ್ಯಾಯ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್ ತಮ್ಮ ವಾದ ಮಂಡಿಸಿ, ಅತ್ಯಾಚಾರ ಅಥವಾ ಕೊಲೆಯಂತಹ ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದ ಮತ್ತು ಎರಡರಿಂದ ಮೂರು ವರ್ಷಗಳ ಅಲ್ಪಾವಧಿಯ ಶಿಕ್ಷೆಯ ನಂತರ ಬಿಡುಗಡೆಯಾದ ವ್ಯಕ್ತಿಯನ್ನು ಸಂಸದ ಅಥವಾ ಶಾಸಕರಾಗಿ ಆಯ್ಕೆ ಮಾಡಬೇಕು ಎಂಬುದನ್ನು ಕಾನೂನು ರೂಪಿಸಿದವರು ಎಂದಿಗೂ ಉದ್ದೇಶಿಸಿರಲಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
12 ವಿಶೇಷ ಕೋರ್ಟ್ ಗಳ ರಚನೆಗೆ ಸೂಚಿಸಿದ್ದ ಸುಪ್ರೀಂ:2017ರಲ್ಲಿ ಸುಪ್ರೀಂ ಕೋರ್ಟ್ 10 ವಿವಿಧ ರಾಜ್ಯಗಳಲ್ಲಿ 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ದೇಶನಗಳನ್ನು ನೀಡಿತ್ತು. ಮತ್ತು ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೇಲ್ವಿಚಾರಣೆಗಾಗಿ ಹಲವಾರು ನಿರ್ದೇಶನಗಳನ್ನು ನೀಡಿತ್ತು ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು. 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವವನ್ನು ಒಳಗೊಂಡಿರುವ ವಿಷಯವಾಗಿರುವುದರಿಂದ ಅಟಾರ್ನಿ ಜನರಲ್ ಇದನ್ನು ತಿಳಿಸಬೇಕು ಎಂದು ಇದೇ ವೇಳೆ ಪೀಠ ಸೂಚನೆ ನೀಡಿತು.
ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕುರಿತು ಮೂವರು ನ್ಯಾಯಮೂರ್ತಿಗಳು ತೀರ್ಪು ನೀಡಿರುವುದರಿಂದ, ಇಬ್ಬರು ನ್ಯಾಯಮೂರ್ತಿಗಳ ಪೀಠ ಪ್ರಕರಣವನ್ನು ಪುನಃ ತೆರೆಯುವುದು ಸೂಕ್ತವಲ್ಲ ಎಂದು ಜಡ್ಜ್ ಗಳು ಹೇಳಿದರು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿ, ಪೀಠದ ಪರಿಗಣನೆಗೆ ತರುವಂತೆ ಇದೇ ವೇಳೆ ಪೀಠವು ಅರ್ಜಿದಾರರಿಗೆ ಸೂಚಿಸಿತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಮಾರ್ಚ್ 4 ರಂದು ಹೆಚ್ಚಿನ ವಿಚಾರಣೆ ನಡೆಸಲಿದೆ.
ಇದನ್ನು ಓದಿ:ಕೊಳೆಗೇರಿ ಜನರಿಗೆ ಕುಡಿಯಲು ಶುದ್ಧ ನೀರಿಲ್ಲ, ನೀವು ಸೈಕಲ್ ಟ್ರ್ಯಾಕ್‌ಗಳ ಬಗ್ಗೆ ಹಗಲು ಕನಸು ಕಾಣುವಿರಿ: ಸುಪ್ರೀಂ ಕೋರ್ಟ್