ಗಾಂಧಿನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವುದೇ ಈ ಚುನಾವಣೆಯ ಪ್ರಮುಖ ವಿಷಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಗಾಂಧಿನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಎಂ.ಕೆ.ದವೆ ಅವರಿಗೆ ಮಧ್ಯಾಹ್ನ 12.39ರ ವಿಜಯ ಮುಹೂರ್ತ ಸಮಯದಲ್ಲಿ ಅಮಿತ್ ಶಾ ನಾಮಪತ್ರ ಸಲ್ಲಿಸಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಈ ಸಂದರ್ಭದಲ್ಲಿ ಜೊತೆಗಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾ, ಪ್ರಧಾನಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸುವುದೇ ಈ ಚುನಾವಣೆಯ ಪ್ರಮುಖ ವಿಷಯವಾಗಿದೆ. ಈ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು. ಮೋದಿ ಅವರ ಮೂರನೇ ಅವಧಿಯು ನಿರ್ಣಾಯಕವಾಗಿದೆ. ಅವರ ಮೊದಲ ಎರಡು ಅಧಿಕಾರದ ಅವಧಿಗಳು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ ತಪ್ಪುಗಳನ್ನು ಸರಿಪಡಿಸುವಲ್ಲಿಯೇ ಕಳೆದು ಹೋಗಿವೆ ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಸ್ಥಾನಕ್ಕೆ ತಮ್ಮನ್ನು ಮರುನಾಮಕರಣ ಮಾಡಿದ್ದಕ್ಕಾಗಿ ಬಿಜೆಪಿಗೆ ಧನ್ಯವಾದ ಅರ್ಪಿಸಿದ ಶಾ, ಪ್ರಧಾನಿ ಮೋದಿ ಇಲ್ಲಿನ ನೋಂದಾಯಿತ ಮತದಾರರಾಗಿರುವುದರಿಂದ ಈ ಕ್ಷೇತ್ರವು ಮಹತ್ವದ್ದಾಗಿದೆ ಎಂದರು.