ಕರ್ನಾಟಕ

karnataka

ETV Bharat / bharat

ಹಿಮಾಚಲ 'ಕೈ'​ ಸರ್ಕಾರದ ಬಿಕ್ಕಟ್ಟು ಶಮನ: 'ಆಲ್‌ ಇಸ್ ವೆಲ್‌' ಎಂದ ಡಿ.ಕೆ.ಶಿವಕುಮಾರ್‌

ಹಿಮಾಚಲ ಪ್ರದೇಶದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಭಿಷೇಕ್​ ಮನು ಸಿಂಘ್ವಿ ಅವರ ಸೋಲಿನ ಹೊಣೆಯನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್​ ಸಿಂಗ್ ಸುಖು ಹೊತ್ತುಕೊಂಡಿದ್ದಾರೆ ಎಂದು ಪಕ್ಷದ ವೀಕ್ಷಕ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

Himachal: Sukhu Takes Responsibility Of Singhvi's Defeat, Differences Ironed Out, Says DK Shivakumar
ಹಿಮಾಚಲ 'ಕೈ'​ ಸರ್ಕಾರದ ಬಿಕ್ಕಟ್ಟು ಶಮನ: ರಾಜ್ಯಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತ ಸಿಎಂ

By PTI

Published : Feb 29, 2024, 6:54 PM IST

ಶಿಮ್ಲಾ(ಹಿಮಾಚಲ ಪ್ರದೇಶ):ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ್ದರಿಂದ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ಗುರುವಾರ ಶಮನವಾಗಿದೆ. ಚುನಾವಣೆಯಲ್ಲಿ ಪಕ್ಷದ ನಾಯಕ ಅಭಿಷೇಕ್​ ಮನು ಸಿಂಘ್ವಿ ಅವರ ಸೋಲಿನ ಹೊಣೆಯನ್ನು ಖುದ್ದು ಮುಖ್ಯಮಂತ್ರಿ ಸುಖವಿಂದರ್​ ಸಿಂಗ್ ಸುಖು ವಹಿಸಿಕೊಂಡಿದ್ದಾರೆ. ಇದರ ಜೊತೆಗೆ ಸಿಎಂ, ಡಿಸಿಎಂ, ಪಕ್ಷದ ರಾಜ್ಯಾಧ್ಯಕ್ಷರನ್ನೊಳಗೊಂಡ ಸಮನ್ವಯ ಸಮಿತಿ ರಚನೆಗೂ ಕಾಂಗ್ರೆಸ್​ ತೀರ್ಮಾನಿಸಿದೆ.

ಸರ್ಕಾರದಲ್ಲಿ ಬಿಕ್ಕಟ್ಟು ಉದ್ಭವಿಸಿದ ತಕ್ಷಣವೇ ಕಾಂಗ್ರೆಸ್​ ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನು ರವಾನಿಸಿತ್ತು. ಇದರ ನಡುವೆ ಅಡ್ಡ ಮತದಾನ ಮಾಡಿದ್ದ 6 ಜನ ಶಾಸಕರನ್ನು ಸ್ಪೀಕರ್​ ಅನರ್ಹಗೊಳಿಸಿ ಆದೇಶಿಸಿದರು. ಮತ್ತೊಂದೆಡೆ, ವೀಕ್ಷಕರಾಗಿ ಬಂದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹರಿಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್​ ಹೂಡಾ ಅವರು ಸಿಎಂ ಸುಖವಿಂದರ್​ ಸಿಂಗ್ ಸುಖು, ಪಕ್ಷದ ಅಧ್ಯಕ್ಷೆ ಪ್ರತಿಭಾ ಸಿಂಗ್ ಸೇರಿದಂತೆ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಸಮಾಲೋಚಿಸಿದರು.

ಇದರ ನಂತರ ಸಂಜೆ ಸಿಎಂ, ಪಕ್ಷದ ಅಧ್ಯಕ್ಷೆ ಹಾಗೂ ವೀಕ್ಷಕರು ಒಟ್ಟಿಗೆ ಸುದ್ದಿಗೋಷ್ಠಿ ನಡೆಸಿದರು. ''ಹಿಮಾಚಲ ಪ್ರದೇಶದ ರಾಜ್ಯಸಭಾ ಚುನಾವಣೆಯ ಬೆಳವಣಿಗೆಗಳ ಬಗ್ಗೆ ಪಕ್ಷದ ಕಾರ್ಯಕರ್ತರ ಪರವಾಗಿ ನಾನು ವಿಷಾದಿಸುತ್ತೇನೆ. ನಮ್ಮ ಸಿಎಂ ಸುಖವಿಂದರ್​ ಸಿಂಗ್ ಸುಖು ಕೆಲವು ವೈಫಲ್ಯ ಒಪ್ಪಿಕೊಂಡಿದ್ದಾರೆ. ಆದರೆ, ಅವು ಮತ್ತೆ ಮುಂದೆ ಸಂಭವಿಸಲ್ಲ ಎಂದು ಭರವಸೆ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿ ರಚಿಸುತ್ತಿದ್ದೇವೆ. ಇದರಲ್ಲಿ ಪಿಸಿಸಿ ಅಧ್ಯಕ್ಷರು, ಸಿಎಂ, ಉಪ ಮುಖ್ಯಮಂತ್ರಿ ಮತ್ತು ಇತರರು ಇರುತ್ತದೆ. ಪಕ್ಷ ಮತ್ತು ಸರ್ಕಾರವನ್ನು ಉಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ನಾವು ಹಿಮಾಚಲ ಸಿಎಂ, ಕಾಂಗ್ರೆಸ್ ಶಾಸಕರು ಮತ್ತು ರಾಜ್ಯ ಘಟಕದ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ. ಎಲ್ಲ ಭಿನ್ನಾಭಿಪ್ರಾಯ ನಿವಾರಣೆಯಾಗಿದೆ'' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಸಿಎಂ ಸುಖು ಮಾತನಾಡಿ, ''ನನ್ನ ರಾಜೀನಾಮೆ ಕುರಿತ ಸುದ್ದಿ ಎಲ್ಲಿಂದ ಬಂತು ಎಂದು ನನಗೆ ಗೊತ್ತಿಲ್ಲ. ಇದನ್ನು ನಾನು ಅಲ್ಲಗಳೆದಿದ್ದೇನೆ. ಆ ಸುದ್ದಿಯನ್ನು ಪಿತೂರಿಯ ಭಾಗವಾಗಿ ಹರಡಲಾಗಿದೆ. ಆದ್ದರಿಂದ ಬಜೆಟ್ ಅಂಗೀಕಾರಕ್ಕಾಗಿ ಸದನದಲ್ಲಿ ಮತದಾನದ ಸಮಯದಲ್ಲಿ ನಮ್ಮ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಇದನ್ನು ಹಬ್ಬಿಸಲಾಗಿದೆ. ನಾವು ಸರ್ಕಾರವನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದೇವೆ. ಆದರೆ, ಅವರು (ಬಿಜೆಪಿ) ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ'' ಎಂದು ದೂರಿದರು.

ಪಕ್ಷದ ಅಧ್ಯಕ್ಷೆ ಪ್ರತಿಭಾ ಸಿಂಗ್ ಮಾತನಾಡಿ, ''ಪ್ರಖ್ಯಾತ ವಕೀಲರಾದ ನಮ್ಮ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ನಾವು ಪಶ್ಚಾತ್ತಾಪ ವ್ಯಕ್ತಪಡಿಸುತ್ತೇವೆ. ಈಗ ಮುಂಬರುವ ಲೋಕಸಭೆ ಚುನಾವಣೆಯ ಸವಾಲು ನಮ್ಮ ಮುಂದಿದೆ. ಅದಕ್ಕಾಗಿ ಇಂದಿನಿಂದಲೇ ಕೆಲಸ ಆರಂಭಿಸಲಿದ್ದೇವೆ. ನಾವು ಶ್ರಮವಹಿಸಿ ಎಲ್ಲ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಲ್​ ಇಸ್​ ವೆಲ್- ಡಿ.ಕೆ.ಶಿವಕುಮಾರ್: ಸುದ್ದಿಗೋಷ್ಠಿಗೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, ''ಆಲ್​ ಇಸ್​ ವೆಲ್ (ಎಲ್ಲವೂ ಚೆನ್ನಾಗಿದೆ). ಈ ಸರ್ಕಾರ 5 ವರ್ಷಗಳ ಕಾಲ ಇರುತ್ತದೆ. ಎಲ್ಲ ಸಮಸ್ಯೆಗಳು ಬಗೆಹರಿದಿವೆ. ನಾವು ಎಲ್ಲ ಶಾಸಕರ ಮಾತುಗಳನ್ನೂ ಕೇಳುತ್ತಿದ್ದೇವೆ, ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ'' ಎಂದು ಹೇಳಿದರು.

ಇದನ್ನೂ ಓದಿ:ಅಡ್ಡ ಮತದಾನ; ಹಿಮಾಚಲ ಪ್ರದೇಶ ಕಾಂಗ್ರೆಸ್​ನ 6 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್​

ABOUT THE AUTHOR

...view details