ಶಿಮ್ಲಾ (ಹಿಮಾಚಲ ಪ್ರದೇಶ):ಹಿಮಾಚಲಪ್ರದೇಶ ರಾಜಕೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಶಾಸಕರ ಬಂಡಾಯ, ಸಚಿವರ ರಾಜೀನಾಮೆಯಿಂದ ಸರ್ಕಾರ ಉರುಳುವ ಭೀತಿ ಉಂಟಾಗಿದೆ. ಇದರಿಂದ ಸರ್ಕಾರ ಉಳಿಸಲು ಸಿಎಂ ಸುಖವಿಂದರ್ ಸಿಂಗ್ ಸುಖು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ವೀಕ್ಷಕರ ಸಭೆಯಲ್ಲಿ ಸಿಎಂ ತಾವು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆ ಚುನಾವಣೆಯ ಬಳಿಕ ಹಿಮಾಚಲಪ್ರದೇಶದಲ್ಲಿ ರಾಜಕೀಯ ವಿಪ್ಲವ ಶುರುವಾಗಿದೆ. ಮತದಾನದ ವೇಳೆ ಬಿಜೆಪಿ ಅಭ್ಯರ್ಥಿಗೆ 6 ಮಂದಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರು. ಸೋಲಿನ ಬೆನ್ನಲ್ಲೇ ಮಾಜಿ ಸಿಎಂ ವೀರಭದ್ರ ಸಿಂಗ್ ಪುತ್ರ, ಸಚಿವ ವಿಕ್ರಮಾದಿತ್ಯ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನದ ಮೊದಲ ದಿನವೇ 15 ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಅಡ್ಡಮತದಾನ ಮಾಡಿದ್ದು, ಸರ್ಕಾರದ ಬುಡ ಅಲ್ಲಾಡಿಸಿದೆ. ಚುನಾವಣೆಯಲ್ಲಿ ಪಕ್ಷ ಸೋಲುಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಭಾರೀ ಅಸಮಾಧಾನ ಭುಗಿಲೆದ್ದಿದೆ.
ರಾಜೀನಾಮೆ ಘೋಷಿಸಿದ ಸಚಿವ:ಸಿಎಂ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಶಾಸಕರನ್ನು ಗೌರವಯುತವಾಗಿ ಕಾಣುತ್ತಿಲ್ಲ ಎಂದು ಆರೋಪಿಸಿ ಮಾಜಿ ಸಿಎಂ ವೀರಭದ್ರ ಸಿಂಗ್ ಪುತ್ರ, ಸಚಿವ ವಿಕ್ರಮಾದಿತ್ಯ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಇಂದು (ಬುಧವಾರ) ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಹೆಸರಿನಲ್ಲಿ ಚುನಾವಣೆ ನಡೆದು ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಅವರನ್ನೇ ಸರ್ಕಾರ ಮರೆತಂತಿದೆ. ಇದರಿಂದ ಜನರ ಭಾವನೆಯನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಸಚಿವನಾಗಿದ್ದರೂ ಹಲವು ವಿಷಯಗಳಲ್ಲಿ ಅವಮಾನ ಮಾಡಲಾಗಿದೆ. ಒಂದು ವರ್ಷ ಸಚಿವನಾಗಿದ್ದುಕೊಂಡು ಏನು ಮಾಡಲು ಸಾಧ್ಯವೋ ಅದನ್ನು ಮಾಡಿದ್ದೇನೆ. ಇನ್ನು ಮುಂದೆ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.