ಚಾಮರಾಜನಗರ: ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯದವರನ್ನೂ ಸೆಳೆಯುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯು ಇದೇ ಜ. 13 ರಿಂದ 17ರ ವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.
ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಚಂದ್ರಮಂಡಲೋತ್ಸವದಿಂದ ಆರಂಭಗೊಂಡು ಮುತ್ತತ್ತಿರಾಯನ ಸೇವೆಯಲ್ಲಿ ಸಂಪನ್ನವಾಗಲಿದೆ. ಜಾತ್ರೆಯ 4ನೇ ದಿನದಂದು ಪಂಕ್ತಿಸೇವೆ ಎಂಬ ವಿಶಿಷ್ಟ ಆಚರಣೆ ನಡೆಯಲಿದೆ. ಸಿದ್ದಪ್ಪಾಜಿ, ಮಂಟೇಸ್ವಾಮಿ ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ಸವಿಯುವುದೇ ಪಂಕ್ತಿ ಸೇವೆಯಾಗಿದೆ. ಪ್ರತಿ ಬಾರಿಯೂ ಜಿಲ್ಲಾಡಳಿತ ಮತ್ತು ಭಕ್ತರ ನಡುವೆ ಮಾಂಸಾಹಾರದ ವಿಚಾರಕ್ಕೆ ಜಟಾಪಟಿ ಇದ್ದೇ ಇರಲಿದೆ.
ಪ್ರಾಣಿವಧೆ ನಿಷೇಧಿಸಿ ಡಿಸಿ ಆದೇಶ : ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ ಅನ್ವಯ ಜನವರಿ 13 ರಿಂದ 17ರ ಮಧ್ಯರಾತ್ರಿಯವರೆಗೆ ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನೀಡುವುದನ್ನು ಮತ್ತು ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಹಾಗೂ ಇದರೊಂದಿಗೆ ಹೈಕೋರ್ಟ್ ನಿರ್ದೇಶನದಂತೆ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ.
ಜೊತೆಗೆ, ಪ್ರಾಣಿ ಬಲಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಪ್ರಾಣಿಬಲಿ ನಿಷೇಧದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಕ್ರಮ ಕೈಗೊಳ್ಳುವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದರೆ ತಕ್ಷಣ ಆದೇಶಗಳನ್ನು ಮಾಡುವ ಸಲುವಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಅವರೊಂದಿಗೆ ಇನ್ನಿತರ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಅಧಿಕಾರಿಗಳನ್ನು ವಿವಿಧ ಪ್ರದೇಶದ ಸ್ಥಳಗಳಿಗೆ ನಿಯೋಜಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.
ಚಿಕ್ಕಲ್ಲೂರು ಹೊಸಮಠದ ಸುತ್ತಮುತ್ತಲಿನ ಪ್ರದೇಶ, ಹಳೆಮಠದ ಸುತ್ತಮುತ್ತಲಿನ ಪ್ರದೇಶ, ಸಿದ್ದಪ್ಪಾಜಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ, ಕೊತ್ತನೂರು, ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತಮುತ್ತಲ ಪ್ರದೇಶ, ರಾಚಪ್ಪಾಜಿ ನಗರ ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶದಲ್ಲಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲು ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಚರ್ಮ ರೋಗ ಭೀತಿ- ಟ್ಯಾಟೂ ಹಾಕಲು ನಿಷೇಧ : ಜಾತ್ರೆ ಎಂದರೇ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯವಾದ್ದರಿಂದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆಯಲ್ಲಿ ಹಚ್ಚೆ ಹಾಕುವುದನ್ನು ನಿಷೇಧಿಸುವಂತೆ ಡಿಸಿಗೆ ಕೋರಿದ ಹಿನ್ನೆಲೆ ಈ ಬಾರಿ ಹಚ್ಚೆ ಹಾಕುವುದಕ್ಕೆ ನಿಷೇಧ ಹೇರಲಾಗಿದೆ.
ಟ್ಯಾಟು ಹಾಕಲು ಒಂದೇ ಸೂಚಿ ಬಳಸುವುದರಿಂದ ಚರ್ಮರೋಗ ಸೇರಿದಂತೆ ಹೆಚ್ಐವಿಯಂತಹ ಮಾರಣಾಂತಿಕ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜಾತ್ರೆಯಲ್ಲಿ ಟ್ಯಾಟೂ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಕಾರವಾರದಲ್ಲೊಂದು ರಂಗೋಲಿ ಜಾತ್ರೆ: ರಾರಾಜಿಸಿದ ಯಶ್, ಅಲ್ಲು ಅರ್ಜುನ್, ಪ್ರಧಾನಿ ಮೋದಿ, ಮಾಜಿ ಪ್ರಧಾನಿಗಳ ಚಿತ್ತಾರ