ಹೈದರಾಬಾದ್: ಟೀಂ ಇಂಡಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಖುಷಿಯಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಪ್ರಮುಖ ಆಟಗಾರ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.
ಫೆ.19 ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಎ ಮತ್ತು ಬಿ ಎಂದು ಎರಡು ವಿಭಾಗಗಳು ಮಾಡಲಾಗಿದ್ದು, ಎ ಗ್ರೂಪ್ನಲ್ಲಿ ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳಿದ್ದರೇ, ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಪ್ರತಿ ತಂಡಗಳು ಸರಣಿಯಲ್ಲಿ ತಲಾ ಮೂರು ಪಂದ್ಯಗಳನ್ನು ಆಡಲಿವೆ. ಈಗಿನಿಂದಲೇ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ.
ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾಗೆ ಸರಣಿ ಆರಂಭಕ್ಕೂ ಮುನ್ನವೇ ಭಾರೀ ಸಂಕಷ್ಟ ಎದುರಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಕಮ್ಮಿನ್ಸ್ ಪಾದದ ಗಾಯದಿಂದ ಬಳಲುತ್ತಿರುವ ಕಾರಣ ಅವರು ಚಾಂಪಿಯನ್ಸ್ ಟ್ರೋಫಿ ಆಡುವುದು ಡೌಟ್ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಠಿ ಎಂಬಂತೆ ಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದ್ದು ಇದರಿಂದ ಕಮ್ಮಿನ್ಸ್ ಅವರನ್ನು ಕೈಬಿಡಲಾಗಿದೆ. ಕಮ್ಮಿನ್ಸ್ ಪಾದದ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದ್ದಾರೆ.
ಮುಂದಿನ ವಾರ ಕಮಿನ್ಸ್ ಸ್ಕ್ಯಾನಿಂಗ್ಗೆ ಒಳಗಾಗಲಿದ್ದು ಈ ವೇಳೆ ಗಾಯದ ತೀವ್ರತೆ ಆಧಾರದ ಮೇಲೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಾರೆಯೇ ಅಥವಾ ಇಲ್ಲವೇ ಎಂಬು ಸ್ಪಷ್ಟವಾಗಲಿದೆ. ಒಂದು ವೇಳೆ ಗಾಯದ ತೀವ್ರತೆ ಹೆಚ್ಚಿದ್ದರೇ ಸರಣಿಯಿಂದ ಹೊರಗುಳಿಯಲಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆ.19 ರಿಂದ ಪ್ರಾರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಫೆ.22 ರಂದು ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ಲಾಸ್ ಏಂಜಲೀಸ್ ಕಾಳ್ಗಿಚ್ಚಿನಲ್ಲಿ ಸುಟ್ಟು ಭಸ್ಮವಾದ 10 ಒಲಿಂಪಿಕ್ಸ್ ಮೆಡಲ್: ಕಣ್ಣಿರು ಹಾಕಿದ ಈಜುಗಾರ!