ಚೆನ್ನೈ, ತಮಿಳುನಾಡು: ಇಲ್ಲಿನ ಕಡಲೂರು, ಮೈಲಾಡುತುರೈ, ನಾಗಪಟ್ಟಿಣಂ ಮತ್ತು ತಿರುವರೂರ್ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ (ಆರ್‌ಎಂಸಿ) ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ಕಾರೈಕಲ್‌ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದ್ದು, ಮಳೆ ತಂದಿದೆ. ಹವಾಮಾನ ಇಲಾಖೆಯ ಪ್ರಕಾರ, ಈ ಕಡಿಮೆ ಒತ್ತಡ ವ್ಯವಸ್ಥೆಯಿಂದಾಗಿ ಚಂಡ ಮಾರುತದ ಸ್ವರೂಪ ಪಡೆದುಕೊಂಡಿದ್ದು, ಇದು ಬಂಗಾಳ ಕೊಲ್ಲಿಯ ಕಡೆಗೆ ಚಲಿಸುವ ಮೊದಲು ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಪ್ರದೇಶಗಳಲ್ಲಿ ನೆಲೆಗೊಂಡಿದೆ. ಇದು ಪಶ್ಚಿಮ-ವಾಯುವ್ಯ ಅಂದರೆ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ನಿರೀಕ್ಷೆಯಿದೆ.
ಚೆಂಗಲ್ಪಟ್ಟು, ವಿಲ್ಲುಪುರಂ, ಕಲ್ಲಕುರಿಚಿ, ಅರಿಯಲೂರು, ಪೆರಂಬಲೂರು, ತಿರುಚ್ಚಿ, ತಂಜಾವೂರು, ಪುದುಕೊಟ್ಟೈ ಜಿಲ್ಲೆಗಳು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ ಕಡಲೂರು, ವಿಲ್ಲುಪುರಂ ಜಿಲ್ಲೆಗಳು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ.