ನವದೆಹಲಿ: 8ನೇ ಬಜೆಟ್ ಮಂಡಿಸಲು ಸಿದ್ದವಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಕಲೆಯ ಸೀರೆ ಉಡುವ ಮೂಲಕ ಪದ್ಮ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.
2021ರಲ್ಲಿ ದುಲಾರಿ ದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿತ್ತು. ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್ ಇನ್ಸಿಟಿಟ್ಯೂಟ್ಗೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದಾಗ ದುಲಾರಿ ದೇವಿ ಅವರನ್ನು ಭೇಟಿಯಾಗಿ, ಬಿಹಾರದ ಮಧುಬನಿ ಕಲೆ ಕುರಿತು ಆತ್ಮೀಯ ಚರ್ಚೆ ನಡೆಸಿದ್ದರು. ಈ ವೇಳೆ, ದುಲಾರಿ ದೇವಿ ಅವರಿಗೆ ಬಜೆಟ್ ದಿನದಂದು ಉಡುವಂತೆ ಕೇಳಿ ಮಧುಬನಿ ಕಲೆಯ ಸೀರೆಯನ್ನು ಉಡುಗೊರೆ ನೀಡಿದ್ದರು.
ಸಾಂಪ್ರದಾಯಿಕ ಚೀಲದಲ್ಲಿ ಟ್ಯಾಬ್ಲೆಟ್: ಈಗಾಗಲೇ ಪೇಪರ್ಲೆಸ್ ಮೊರೆ ಹೋಗಿರುವ ವಿತ್ತ ಸಚಿವರು ಡಿಜಿಟಲ್ ಬಜೆಟ್ ಪ್ರತಿ ಓದಲಿದ್ದಾರೆ. ಈ ಪ್ರತಿ ಹೊಂದಿದ ಟ್ಯಾಬ್ಲೆಟ್ ಅನ್ನು ಸಾಂಪ್ರದಾಯಿಕವಾಗಿ ಬಹು ಖಾತಾ ಶೈಲಿಯ ಪೌಚ್ (ಬ್ಯಾಗ್)ನಲ್ಲಿ ಮುಚ್ಚಿ ಕೈಯಲ್ಲಿ ಹಿಡಿದಿದ್ದಾರೆ.
ಮೊದಲ ಬಾರಿಗೆ ಪೂರ್ಣ ಕಾಲಿಕ ಮಹಿಳಾ ಹಣಕಾಸು ಸಚಿವರಾದ ಬಳಿಕ 2019 ರಿಂದ ನಿರ್ಮಲಾ ಸೀತಾರಾಮನ್ ವಸಾಹತು ಶಾಹಿಯ ಬ್ರಿಫ್ಕೇಸ್ ಸಂಸ್ಕೃತಿ ಬಿಟ್ಟು, ಅದರ ಬದಲಾಗಿ ಸಾಂಪ್ರದಾಯಿಕ ಬಹಿ ಖಾತಾದ ಮೂಲಕ ಬಜೆಟ್ ಪ್ರತಿ ಒಯ್ಯಲು ಆರಂಭಿಸಿದ್ದರು. ಇದೇ ಸಾಂಪ್ರದಾಯವನ್ನು ಹಲವು ಕಾಲ ಮುಂದುವರೆಸಿದ ಅವರು, ಸಾಂಕ್ರಾಮಿಕ ಪರಿಣಾಮದಿಂದಾಗಿ 2021ರಿಂದ ಪೇಪರ್ ಬದಲಾಗಿ ಡಿಜಿಟಲ್ ಟ್ಯಾಬ್ಲೆಟ್ ಮೊರೆ ಹೋದರು. ಇದೆ ಸಂಪ್ರದಾಯವನ್ನು ಇಂದು ಕೂಡ ಅವರು ಮುಂದುವರೆಸಿದರು.
ಕೈಮಗ್ಗದ ಬಿಳಿ ಸೀರೆಯಲ್ಲಿ ಮೀನಿನ ಥೀಮ್ ಎಂಬ್ರಾಯಡರಿ ಜೊತೆಗೆ ಬಂಗಾರದ ಅಂಚು ಮಧುಬನಿ ಸೀರೆ ಮೆರಗನ್ನು ಹೆಚ್ಚಿಸಿದೆ. ರಾಷ್ಟ್ರಪತಿಗಳ ಭೇಟಿಗೂ ಮುನ್ನ ಅವರು ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಸಂಪ್ರದಾಯದಂತೆ ಬಜೆಟ್ ಪ್ರತಿ ಚೀಲ ಹಿಡಿದು ಪೋಸ್ ನೀಡಿದ್ದರು. ಈ ವೇಳೆ, ಅವರು ಜೊತೆ ಹಲವು ಅಧಿಕಾರಿಗಳಿದ್ದರು.
ಬಂಗಾರದ ರಾಷ್ಟ್ರೀಯ ಲಾಂಛನ: ಬಂಗಾರದ ರಾಷ್ಟ್ರೀಯ ಲಾಂಛನ ಒಳಗೊಂಡಿರುವ ಕೆಂಪು ಬ್ಯಾಗ್ನಲ್ಲಿ ಟ್ಯಾಬ್ಲೆಟ್ ಹಿಡಿದು ಹೊರಟಿರುವ ನಿರ್ಮಲಾ ಸೀತಾರಾಮನ್ ಮೊದಲಿಗೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಳಿಕ ಅವರು ಸಂಸತ್ ಪ್ರವೇಶಿಸಿದ್ದಾರೆ.
2014ರಿಂದ ಅಂದರೆ ಮೂರು ಅವಧಿಗಳಿಂದ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ 14ನೇ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರ ಎಂಟನೇ ಬಜೆಟ್ ಇದಾಗಿದೆ. 2019ರಲ್ಲಿ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ನೇಮಕಗೊಂಡರು. 2019ರ ಜುಲೈ 5ರಂದು ಮೊದಲ ಬಾರಿಗೆ ಅವರು ಮಧ್ಯಂತರ ಬಜೆಟ್ ಮಂಡಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ದೇಶದ ಕಣ್ಣು: ಟ್ಯಾಬ್ ಮೂಲಕ ಬಜೆಟ್ ಮಂಡಿಸಲಿರುವ ಸೀತಾರಾಮನ್
ಇದನ್ನೂ ಓದಿ: ಬಜೆಟ್ ಮೇಲೆ ಕೋಟ್ಯಂತರ ನಿರೀಕ್ಷೆಗಳು: ಹೆಚ್ಚಳವಾಗುತ್ತಾ ಆದಾಯ ತೆರಿಗೆ ಮಿತಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಆಗುತ್ತಾ ವರದಾನ?