ಹೈದರಾಬಾದ್:ಫಾರ್ಮುಲಾ ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ಮಂಗಳವಾರ ನಿರಾಕರಿಸಿತು. ಅಲ್ಲದೆ ಅವರನ್ನು ಬಂಧಿಸದಂತೆ ನೀಡಲಾದ ರಕ್ಷಣೆಯನ್ನು ನ್ಯಾಯಾಲಯ ಹಿಂಪಡೆಯಿತು.
ಇದಕ್ಕೂ ಮುನ್ನ, ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿದ ನಂತರ ಹೈಕೋರ್ಟ್ ಡಿಸೆಂಬರ್ 31ರಂದು ಅರ್ಜಿಯ ಮೇಲಿನ ಆದೇಶಗಳನ್ನು ಕಾಯ್ದಿರಿಸಿತ್ತು. ತೀರ್ಪು ನೀಡುವವರೆಗೆ ಮತ್ತು ರಕ್ಷಣೆಯನ್ನು ತೆಗೆದುಹಾಕುವವರೆಗೆ ಮಾಜಿ ಸಚಿವ ಕೆ.ಟಿ.ರಾಮರಾವ್ ಅವರನ್ನು ಬಂಧಿಸದಂತೆ ನ್ಯಾಯಾಲಯವು ಈ ಹಿಂದೆ ಎಸಿಬಿಯನ್ನು ನಿರ್ಬಂಧಿಸಿತ್ತು.
2023ರಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ರೇಸ್ ನಡೆಸಲು ಅನುಮತಿಯಿಲ್ಲದೆ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿಸಿದ ಆರೋಪದ ಮೇಲೆ ರಾಮರಾವ್ ವಿರುದ್ಧ ಎಸಿಬಿ ಡಿಸೆಂಬರ್ 19ರಂದು ಪ್ರಕರಣ ದಾಖಲಿಸಿದೆ.
ಸರ್ಕಾರದ ಬೊಕ್ಕಸಕ್ಕೆ ಸುಮಾರು 55 ಕೋಟಿ ರೂ.ಗಳ ನಷ್ಟವನ್ನುಂಟು ಮಾಡಿದ ಕ್ರಿಮಿನಲ್ ದುರುಪಯೋಗ, ಕ್ರಿಮಿನಲ್ ದುರ್ನಡತೆ, ನಂಬಿಕೆ ಉಲ್ಲಂಘನೆ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫಾರ್ಮುಲಾ ಇ ರೇಸ್ ಫೆಬ್ರವರಿ 2024ರಲ್ಲಿ ಮತ್ತೊಮ್ಮೆ ನಡೆಯಬೇಕಿತ್ತಾದರೂ, 2023ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ರದ್ದುಗೊಳಿಸಲಾಗಿದೆ. ಹಿಂದಿನ ಬಿಆರ್‌ಎಸ್ ಆಡಳಿತದಲ್ಲಿ ನಡೆದ ರೇಸ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಮೇಲೆ ಜನವರಿ 7 ರಂದು ವಿಚಾರಣೆಗೆ ಹಾಜರಾಗುವಂತೆ ರಾಮರಾವ್ಗೆ ಇಡಿ ಸಮನ್ಸ್ ನೀಡಿತ್ತು. ಅಕ್ರಮ ನಡೆದಿದೆ ಎನ್ನಲಾದ ಅವಧಿಯಲ್ಲಿ ರಾಮರಾವ್ ಪೌರಾಡಳಿತ ಸಚಿವರಾಗಿದ್ದರು.
ಎಫ್ಐಆರ್ನಲ್ಲಿ ಸದ್ಯ ಶಾಸಕರಾಗಿರುವ ರಾಮರಾವ್ ಅವರನ್ನು ಪ್ರಮುಖ ಆರೋಪಿಯಾಗಿ, ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಮತ್ತು ನಿವೃತ್ತ ಅಧಿಕಾರಿ ಬಿಎಲ್ಎನ್ ರೆಡ್ಡಿ ಅವರನ್ನು ಕ್ರಮವಾಗಿ 2 ಮತ್ತು 3ನೇ ಆರೋಪಿಗಳಾಗಿ ಹೆಸರಿಸಲಾಗಿದೆ.
ಇದನ್ನೂ ಓದಿ: ಕುಂಭಮೇಳ: ಗೋ ರಕ್ಷಣೆ ಜಾಗೃತಿಗಾಗಿ 324 ಕುಂಡಗಳಲ್ಲಿ ಮಹಾಯಜ್ಞ, 1100 ಪುರೋಹಿತರು ಭಾಗಿ - MAHA KUMBH MELA 2025