ಚಂಡೀಗಢ:ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೆಲ ರೈತರು ಬ್ಯಾರಿಕೇಡ್ಗಳನ್ನು ಧ್ವಂಸ ಮಾಡಲು ಮುಂದಾದಾಗ, ಪೊಲೀಸರು ಅಶ್ರುವಾಯು ಸಿಡಿಸಿ ತಡೆಯುತ್ತಿದ್ದಾರೆ.
ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು 5 ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ನಂತರ ಪಂಜಾಬ್ ಮತ್ತು ಹರಿಯಾಣದ ಗಡಿಯಲ್ಲಿ ರೈತರು ಹೋರಾಟ ಚುರುಕುಗೊಳಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ 'ದೆಹಲಿ ಚಲೋ' ಮೆರವಣಿಗೆಯನ್ನು ಪುನರಾರಂಭಿಸಲಿದ್ದಾರೆ.
ರೈತರು ಮತ್ತು ಕೇಂದ್ರ ಸರ್ಕಾರ ಮಧ್ಯೆ ಈವರೆಗೂ ನಡೆದ ನಾಲ್ಕು ಸಭೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹೀಗಾಗಿ ರೈತರು ಇಟ್ಟಿರುವ ಎಂಎಸ್‌ಪಿ ಬೇಡಿಕೆಯನ್ನು ಯಥಾವತ್ತಾಗಿ ಅಂಗೀಕರಿಸದಿದ್ದರೆ ದೆಹಲಿ ಮುತ್ತಿಗೆ ಹೋರಾಟ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಹಲವು ಬೇಡಿಕೆಗಳನ್ನು ಒಪ್ಪಲಾಗಿದೆ. ಕೆಲ ಬೆಳೆಗಳಿಗೆ ನೀಡಬೇಕಾದ ಎಂಎಸ್‌ಪಿ ಬಗ್ಗೆ ಚರ್ಚೆ ಬಳಿಕ ಅಂಗೀಕರಿಸಲಾಗುವುದು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ರೈತರು ಸುತಾರಾಂ ಒಪ್ಪುತ್ತಿಲ್ಲ.
ಫೆಬ್ರವರಿ 13 ರಂದು ದೆಹಲಿ ಚಲೋ ಮೆರವಣಿಗೆಯನ್ನು ಪ್ರಾರಂಭಿಸಿದ ಸಾವಿರಾರು ರೈತರನ್ನು ಹರಿಯಾಣ ಗಡಿಯಲ್ಲಿಯೇ ಪೊಲೀಸರು ತಡೆ ಹಿಡಿದಿದ್ದಾರೆ. ಆಗಲೂ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಯಿತು. ಬ್ಯಾರಿಕೇಡ್ಗಳನ್ನು ಮುರಿದ ಉದ್ರಿಕ್ತ ರೈತರ ಮೇಲೆ ಪೊಲೀಸರು ಡ್ರೋನ್ ನೆರವಿನಿಂದ ಅಶ್ರುವಾಯು ಸಿಡಿಸಿ ಜನರನ್ನು ಅಲ್ಲಿಂದ ಚದುರಿಸಿದ್ದರು. ಅಂದಿನಿಂದ ಹರಿಯಾಣ - ಪಂಜಾಬ್‌ಗೆ ಹೊಂದಿಕೊಂಡಿರುವ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಬಿಡಾರ ಹೂಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾವು ಬೆಳೆಗಳಿಗೆ ಎಂಎಸ್‌ಪಿ ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಯುತ್ತಿರುವ 'ದೆಹಲಿ ಚಲೋ' ಹೋರಾಟವನ್ನು ಮುನ್ನಡೆಸುತ್ತಿವೆ.
ಮಾತುಕತೆಗೆ ಬರಲು ಕೇಂದ್ರ ಆಹ್ವಾನ:ರೈತರ ಬೇಡಿಕೆಗಳನ್ನು ಆಲಿಸಲಾಗುವುದು. ಮತ್ತೆ ಮಾತುಕತೆಗೆ ಬನ್ನಿ ಎಂದು ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಾಲ್ಕನೇ ಸುತ್ತಿನ ಮಾತುಕತೆಯ ನಂತರ, ಎಂಎಸ್‌ಪಿ, ಬೆಳೆ ವೈವಿಧ್ಯೀಕರಣ, ತ್ಯಾಜ್ಯ ಸಮಸ್ಯೆ, ರೈತರ ಮೇಲೆ ಹಾಕಲಾದ ಎಫ್‌ಐಆರ್ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚಿಸಲು ಸಿದ್ಧವಿದೆ. ಇದಕ್ಕಾಗಿ ರೈತರು ಐದನೇ ಸುತ್ತಿನ ಮಾತುಕತೆಗೆ ಬರಬೇಕು. ಸರ್ಕಾರ ಮತ್ತೊಮ್ಮೆ ರೈತ ಮುಖಂಡರನ್ನು ಚರ್ಚೆಗೆ ಆಹ್ವಾನಿಸುತ್ತಿದೆ. ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಶಂಭು ಗಡಿಯಲ್ಲಿ 14 ಸಾವಿರ ಮಂದಿ, 1200 ಟ್ರ್ಯಾಕ್ಟರ್, ಪೊಕ್ಲೆನ್, ಜೆಸಿಬಿಗಳು: ತೀವ್ರ ಎಚ್ಚರಿಕೆಯಿಂದರಲು ಕೇಂದ್ರದ ಸೂಚನೆ