ನವದೆಹಲಿ :ಯಮುನಾ ನದಿ ನೀರಿಗೆ ಬಿಜೆಪಿ ವಿಷ ಬೆರೆಸುತ್ತಿದೆ ಎಂಬ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಪಕ್ಕೆ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು, ಅದೇ ನದಿ ನೀರನ್ನು ಕುಡಿಯುವ ಮೂಲಕ ತಿರುಗೇಟು ನೀಡಿದರು.
ದೆಹಲಿಯ ಪಲ್ಲಾ ಗ್ರಾಮದ ಯಮುನಾ ನದಿ ದಂಡೆಗೆ ಭೇಟಿ ನೀಡಿದ ಹರಿಯಾಣ ಸಿಎಂ ನದಿ ನೀರು ಸೇವಿಸಿದರು. ಬಳಿಕ ಮಾತನಾಡಿದ ಅವರು, "ಹರಿಯಾಣ ಬಿಜೆಪಿ ಸರ್ಕಾರ ಯಮುನಾ ನೀರಿಗೆ ವಿಷ ಹಾಕುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಅದೇ ನೀರನ್ನು ಈಗ ನಾನು ಕುಡಿದಿದ್ದೇನೆ. ನನ್ನ ಜೀವಕ್ಕೆ ಅಪಾಯವಾದಲ್ಲಿ ಕೇಜ್ರಿವಾಲ್ ಮಾತು ಸತ್ಯವಾಗಲಿದೆ" ಎಂದು ಸವಾಲು ಹಾಕಿದರು.
"ದೆಹಲಿಯ ಮಾಜಿ ಸಿಎಂ ರಾಜಕೀಯ, ಚುನಾವಣಾ ಲಾಭಕ್ಕಾಗಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ ಕಾರಣ, ನಾನೇ ಇಲ್ಲಿಗೆ ಬಂದು ನೀರು ಸೇವಿಸಿದ್ದೇನೆ. ಸಾಮೂಹಿಕ ನರಮೇಧ ನಡೆಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಹೇಳಿಕೆ ನೀಡಿದ್ದು ದುರದೃಷ್ಟಕರ" ಎಂದು ಟೀಕಿಸಿದರು.
"ಜಲಸಂಪನ್ಮೂಲ ಪ್ರಾಧಿಕಾರವು ನದಿ ನೀರಿನ ಮಾದರಿಯನ್ನು ಪಡೆದು ಪರೀಕ್ಷಿಸಿದೆ. ಅದರಲ್ಲಿ ಯಾವುದೇ ವಿಷಕಾರಿ ಅಂಶ ಕಂಡುಬಂದಿಲ್ಲ. ಅರವಿಂದ್ ಕೇಜ್ರಿವಾಲ್ ತಮ್ಮ ಜೀವನದುದ್ದಕ್ಕೂ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ" ಎಂದು ಮೂದಲಿಸಿದರು.
ಪ್ರಧಾನಿ ಮೋದಿ ಟೀಕೆ :ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಕೇಜ್ರಿವಾಲ್ ಅವರ ಹೇಳಿಕೆಗಳನ್ನು ಟೀಕಿಸಿದ್ದರು. "ಹರಿಯಾಣ ಸರ್ಕಾರವು ದೆಹಲಿಗೆ ಹರಿಯುವ ಯಮುನಾ ನದಿ ನೀರಿನಲ್ಲಿ ವಿಷ ಬೆರೆಸುತ್ತಿದೆ ಎಂದು ಆಪ್ದಾ (ಆಪತ್ತು) ಸರ್ಕಾರ ಆರೋಪಿಸಿದೆ. ಹಿಂದು ಸಂಸ್ಕೃತಿಯಲ್ಲಿ ನಾವು ನದಿಗಳನ್ನು ಪವಿತ್ರ ಎಂದು ಭಾವಿಸುತ್ತೇವೆ. ಕೇಜ್ರಿವಾಲ್ ಇಂತಹ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಹರಿಯಾಣಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಗುಡುಗಿದರು.