ಪ್ರಯಾಗ್‌ರಾಜ್ (ಉತ್ತರ ಪ್ರದೇಶ):ಜ್ಞಾನವಾಪಿಯಲ್ಲಿ ಹಿಂದೂಗಳು ಮಾಡುತ್ತಿರುವ ಪೂಜೆಯನ್ನು ನಿಲ್ಲಿಸಬೇಕು ಎಂದು ಕೋರಿ ಮುಸ್ಲಿಂ ಪಕ್ಷಗಾರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾ ಮಾಡಿದೆ. 'ನೆಲಮಾಳಿಗೆಯಲ್ಲಿ ಸಲ್ಲಿಸಲಾಗುತ್ತಿರುವ ಪೂಜೆ ಮುಂದುವರಿಸಬಹುದು. ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡುಬರುತ್ತಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ಪೀಠ ಈ ತೀರ್ಪು ಓದಿದ್ದು, 'ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಂಬಂಧಪಟ್ಟ ಕಕ್ಷಿದಾರರ ವಾದಗಳನ್ನು ಪರಿಗಣಿಸಲಾಗಿದೆ. ಜನವರಿ 17 ರಂದು ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಪೂಜೆ ಸಲ್ಲಿಸಲು ನೀಡಿದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣ ಸಿಗುತ್ತಿಲ್ಲ' ಎಂದು ಅರ್ಜಿಯನ್ನು ವಜಾ ಮಾಡಿದರು.
ಇದರಿಂದ ಜ್ಞಾನವಾಪಿ ನೆಲಮಾಳಿಗೆಯಲ್ಲಿ (ವ್ಯಾಸ್ ತೆಹಖಾನಾ) ಪೂಜೆ ಸಲ್ಲಿಕೆಗೆ ಯಾವುದೇ ಅಡ್ಡಿ ಇಲ್ಲವಾಗಿದೆ. ಜೊತೆಗೆ ವಾರಾಣಸಿ ಜಿಲ್ಲಾಧಿಕಾರಿಯು ಪೂಜಾ ವಿಧಾನಗಳು ನಡೆಯಲು ಅನುವು ಮಾಡಿಕೊಡುವುದು ಮುಂದುವರಿಯಲಿದೆ.
ಸುಪ್ರೀಂ ಕೋರ್ಟ್ನಲ್ಲೂ ಹೋರಾಡ್ತೀವಿ:ಈ ಬಗ್ಗೆ ಮಾಹಿತಿ ನೀಡಿರುವ ಹಿಂದೂ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, ಜನವರಿ 17 ಮತ್ತು 31ರ ಆದೇಶದ ವಿರುದ್ಧ ಮುಸ್ಲಿಂ ಪಕ್ಷಗಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಈಗ ನಡೆಯುತ್ತಿರುವ ಪೂಜೆ ಮುಂದುವರಿಯಲಿದೆ. ಅಂಜುಮನ್ ಇಂತೆಜಾಮಿಯಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದರೆ, ಅಲ್ಲಿಯೂ ನಾವು ಹೋರಾಡುತ್ತೇವೆ ಎಂದರು.
ವಕೀಲ ಪ್ರಭಾಷ್ ಪಾಂಡೆ ಮಾತನಾಡಿ, ವಾರಾಣಸಿ ಜಿಲ್ಲಾ ನ್ಯಾಯಾಧೀಶರ ಆದೇಶದ ವಿರುದ್ಧ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಗಳು ವಜಾಗೊಳಿಸಿದರು. ಅಂದರೆ ಪೂಜೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ. ಇದು ನಮ್ಮ ಸನಾತನ ಧರ್ಮಕ್ಕೆ ಸಿಕ್ಕ ದೊಡ್ಡ ಜಯ. ಮುಸ್ಲಿಂ ಕಡೆಯವರು ಮನಪರಿವರ್ತಿಸಿಕೊಳ್ಳಲು ಇದೊಂದು ಅವಕಾಶ ಎಂದರು.
ವಾರಾಣಸಿ ಕೋರ್ಟ್ ತೀರ್ಪು ಹೀಗಿತ್ತು?:ಈಗಿರುವ ಮಸೀದಿಯೊಳಗೆ ನಾಲ್ಕು ತೆಹಖಾನಾಗಳಿದ್ದು, ಅದರಲ್ಲಿ ಒಂದಾದ ವ್ಯಾಸ್ ತೆಹಖಾನಾ ಇಲ್ಲಿ ವಾಸಿಸುತ್ತಿರುವ ವ್ಯಾಸ್ ಕುಟುಂಬಕ್ಕೆ ಸೇರಿದ್ದಾಗಿದೆ. ಅದರಲ್ಲಿ ಅವರ ಕುಟುಂಬಸ್ಥರು ಹಿಂದಿನಿಂದಲೂ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲ ವರ್ಷಗಳ ಹಿಂದೆ ಪೂಜೆ ಸಲ್ಲಿಕೆಯನ್ನು ಉತ್ತರಪ್ರದೇಶ ಸರ್ಕಾರ ತಡೆ ಹಿಡಿದಿತ್ತು. ಇದಕ್ಕೆ ಮರು ಅವಕಾಶ ನೀಡಬೇಕು ಎಂದು ಕೋರಿ ವ್ಯಾಸ್ ಕುಟುಂಬ ವಾರಾಣಸಿ ಜಿಲ್ಲಾ ಕೋರ್ಟ್‌ಗೆ ಮನವಿ ಮಾಡಿತ್ತು. ಅದನ್ನು ಆಲಿಸಿದ್ದ ಕೋರ್ಟ್ ಜನವರಿ 17 ರಂದು ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ:ಜ್ಞಾನವಾಪಿಯಲ್ಲಿ ಪೂಜೆ: ಇಂದು ಬೆಳಗ್ಗೆ 10 ಗಂಟೆಗೆ ಅಲಹಾಬಾದ್ ಕೋರ್ಟ್ನಿಂದ ಮಹತ್ವದ ತೀರ್ಪು