ವಾರಣಾಸಿ (ಉತ್ತರ ಪ್ರದೇಶ) :ಮಸೀದಿ ಅಥವಾ ಮಂದಿರವೇ ಎಂಬ ಜಿಜ್ಞಾಸೆ ಸೃಷ್ಟಿಸಿರುವ ಜ್ಞಾನವಾಪಿ ಸ್ಥಳದ ಸರ್ವೇ ವರದಿಯನ್ನು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಜೊತೆಗೆ ಅದರ ಪ್ರತಿಯನ್ನು ಹಿಂದು ಮತ್ತು ಮುಸ್ಲಿಂ ಪಕ್ಷಗಾರರಿಗೆ ನೀಡಿ ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಬುಧವಾರ ಸೂಚಿಸಿದೆ.
ಪ್ರಕರಣದ ಕುರಿತು ಇಂದು ನಡೆದ ವಿಚಾರಣೆಯಲ್ಲಿ ಎರಡೂ ಕಡೆಯ ವಾದ ಆಲಿಸಿದ ಕೋರ್ಟ್, ಎಎಸ್‌ಐ ನಡೆಸಿದ ಸರ್ವೇ ಬಗ್ಗೆ ಮಾಹಿತಿ ಬಹಿರಂಗವಾಗಬೇಕಿದೆ. ಹಾಗಾಗಿ ಅದನ್ನು ಜನರ ತಿಳಿವಳಿಕೆಗೆ ಮುಕ್ತಗೊಳಿಸಬೇಕು. ಇದರೊಂದಿಗೆ ವ್ಯಾಜ್ಯವನ್ನು ನಡೆಸುತ್ತಿರುವ ಹಿಂದು ಮತ್ತು ಮುಸ್ಲಿಂ ಪಕ್ಷಗಾರರಿಗೆ ಅದರ ಹಾರ್ಡ್ ಕಾಪಿಯನ್ನು ನೀಡಬೇಕು ಎಂದು ಹೇಳಿತು.
ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ನ್ಯಾಯಾಲಯವು ಎರಡೂ ಕಡೆಯ ವಾದವನ್ನು ಆಲಿಸಿದ್ದು, ಎಎಸ್‌ಐ ನಡೆಸಿದ ಸರ್ವೇ ವರದಿಯ ಹಾರ್ಡ್ ಕಾಪಿಯನ್ನು ಎರಡೂ ಕಡೆಯವರಿಗೆ ನೀಡಲು ಸೂಚಿಸಿದೆ. ಇದಕ್ಕೆ ಎಎಸ್‌ಐ ಕೂಡ ಒಪ್ಪಿದೆ. ಆದರೆ, ಅದನ್ನು ಇಮೇಲ್ ಮೂಲಕ ನೀಡಲು ನಿರಾಕರಿಸಿದೆ. ಬಳಿಕ ವರದಿಯ ಹಾರ್ಡ್ ಕಾಪಿಯನ್ನು ಪಡೆಯಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದರು.
ಎಎಸ್‌ಐ ವರದಿಯ ದೃಢೀಕೃತ ಪ್ರತಿಯನ್ನು ಹಿಂದು ಮತ್ತು ಮುಸ್ಲಿಂ ಪಕ್ಷಗಾರರು ಪಡೆಯುವಂತೆ ಒಪ್ಪಂದಕ್ಕೆ ಬರಲಾಗಿದೆ. ನ್ಯಾಯಾಲಯವು ಆದೇಶವನ್ನು ಜಾರಿಗೊಳಿಸಿದ ತಕ್ಷಣ, ನಮ್ಮ ಕಾನೂನು ತಂಡವು ಪ್ರಮಾಣೀಕೃತ ಪ್ರತಿಗಾಗಿ ಅರ್ಜಿ ಸಲ್ಲಿಸುತ್ತದೆ ಎಂದು ತಿಳಿಸಿದರು.