ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಜಲಪೈಗುರಿಯಲ್ಲಿ ಮತ್ತೊಂದು ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ನಡೆದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ, ಐದು ಬೋಗಿಗಳು ಹಳಿ ತಪ್ಪಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಜಲಪೈಗುರಿಯ ನ್ಯೂ ಮೇನಗುರಿ ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ 6.20ರ ಸುಮಾರಿಗೆ ಈ ಘಟನೆ ನಡೆದಿದೆ. ಖಾಲಿ ಗೂಡ್ಸ್ ರೈಲು ಚಲಿಸುತ್ತಿದ್ದಾಗ, ಇದ್ದಕ್ಕಿಂದ್ದಂತೆ ಐದು ವ್ಯಾಗನ್‌ಗಳು ಹಳಿತಪ್ಪಿವೆ. ಈ ಮಾರ್ಗವಾಗಿ ಬರುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಎಂದು ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದ ಬಳಿಕ ಅಲಿಪುರ್‌ದವಾರ್‌ನ ಡಿಆರ್‌ಎಂ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ರೈಲನ್ನು ಮತ್ತೆ ಹಳಿ ಮೇಲೆ ತರುವ ಪ್ರಯತ್ನ ಸಾಗುತ್ತಿದೆ. ಘಟನೆಯ ನಂತರ, ಹಲವು ರೈಲುಗಳನ್ನು ಲೇನ್ ಸಂಖ್ಯೆ 2 ರಿಂದ 1 ನೇ ಲೇನ್ಗೆ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಅಸ್ಸೋಂನಿಂದ ನ್ಯೂ ಜಲಪೈಗುರಿಗೆ ಬರುವ ಎರಡು ಮಾರ್ಗಗಳನ್ನು ಮುಚ್ಚಲಾಯಿತು. Y ಚಾನಲ್‌ನಲ್ಲಿ ಮಾತ್ರ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಐದು ಬೋಗಿಗಳು ಹಳಿ ತಪ್ಪಿದ್ದರಿಂದ ವಿದ್ಯುತ್ ತಂತಿ ಮತ್ತು ಕಂಬಗಳಿಗೆ ಹಾನಿಯಾಗಿದೆ. ಹಳಿ ತಪ್ಪಲು ಕಾರಣವನ್ನು ತಿಳಿಯಲು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಎನ್‌ಎಫ್‌ಆರ್ ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರೈಲು ಹಳಿ ತಪ್ಪುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕೆಲವು ತಿಂಗಳಲ್ಲಿ ಹಲವಾರು ಪ್ರಕರಣಗಳು ವರದಿಯಾಗಿವೆ. ಜೂನ್ 17 ರಂದು ಡಾರ್ಜಿಲಿಂಗ್ ಜಿಲ್ಲೆಯ ರಂಗಪಾಣಿ ನಿಲ್ದಾಣದ ಬಳಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿ 11 ಪ್ರಯಾಣಿಕರು ಸಾವನ್ನಪ್ಪಿದ್ದರು. ಕಾರ್ಗೋ ರೈಲಿಗೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಬಳಿಕ ಜುಲೈ 31 ರಂದು ಡಾರ್ಜಿಲಿಂಗ್ ಜಿಲ್ಲೆಯ ಒಂದೇ ಸ್ಥಳದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್‌ಗಳು ಹಳಿತಪ್ಪಿದ್ದವು.
ಇದನ್ನೂ ಓದಿ:ಗುಜರಾತ್ ರೈಲು ವಿಧ್ವಂಸಕ ಕೃತ್ಯದ ಸಂಚು ಬಯಲು; ಸಿಬ್ಬಂದಿಗಳಿಂದಲೇ ನಡೆಯಿತು ಖತರ್ನಾಕ್ ಪ್ಲಾನ್! - police Detain railway employees