ಅಯೋಧ್ಯೆ (ಉತ್ತರ ಪ್ರದೇಶ) :ಪ್ರಧಾನಿ ನರೇಂದ್ರ ಮೋದಿ ಅವರು ಶತಮಾನಗಳ ನಿರೀಕ್ಷೆಯ ಭವ್ಯ ರಾಮಮಂದಿರ ಉದ್ಘಾಟಿಸಿದ್ದು, ದೇವರು ನೀಡಿದ ಅವಕಾಶಗಳಲ್ಲಿ ಒಂದಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಹೇಳಿದರು.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಅಯೋಧ್ಯೆಯಲ್ಲಿ ಇಂದು ಭವ್ಯ ರಾಮಮಂದಿರ ಲೋಕಾರ್ಪಣೆಯಾಗಿದೆ. ಇಂತಹ ದಿವ್ಯ ಕಾರ್ಯಕ್ರಮದ ಯಜಮಾನತ್ವ ವಹಿಸಿದ ಮೋದಿ ಅವರು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇದು ಅವರಿಗೆ ಸಿಕ್ಕ ಅದ್ಭುತ ಅವಕಾಶ ಎಂದು ಬಣ್ಣಿಸಿದರು.
ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರಧಾನಿ ಮೋದಿ ಅವರು ಪೂಜೆ ಸಲ್ಲಿಸಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಅವರು ಅಮೂಲ್ಯ ವ್ಯಕ್ತಿ. ಇಂತಹ ಅವಕಾಶ ಎಲ್ಲರಿಗೂ ಸಿಗದು. ಮೋದಿ ವಿಷ್ಣು ಮತ್ತು ಶಿವನ ಆಶೀರ್ವಾದವನ್ನು ಪಡೆದ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
ವಿಪಕ್ಷಗಳ ನಿರ್ಧಾರ ಸರಿಯಲ್ಲ:ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ವಿಪಕ್ಷಗಳು ಗೈರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡರು, ಇಂತಹ ದಿವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಪುಣ್ಯದ ಕೆಲಸ. ವಿರೋಧ ಪಕ್ಷಗಳು ತೆಗೆದುಕೊಂಡ ನಿಲುವು ಸರಿಯಲ್ಲವೇನೋ ಎಂಬುದು ನನ್ನ ಭಾವನೆ. ಆಕ್ಷೇಪಗಳೇನಿದ್ದರೂ, ಅದು ಮಂದಿರದ ವಿಚಾರದಲ್ಲಿ ಬೇಡವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಟ್ರಸ್ಟ್ಗೆ ಧನ್ಯವಾದ ಅರ್ಪಿಸಿದರು.