ನವದೆಹಲಿ: ಉದ್ಯೋಗಕ್ಕಾಗಿ ನಗದು ಪ್ರಕರಣದಲ್ಲಿ ಯಾವುದೇ ಆಧಾರವಿಲ್ಲದೇ, ತಮ್ಮ ಹೆಸರನ್ನು ಉಲ್ಲೇಖಿಸಿದ ಕಾರಣಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸವಾಂತ್ ಪತ್ನಿ ಸುಲಕ್ಷಣಾ ಸವಾಂತ್ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಗೋವಾದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಎಎಪಿ ನಾಯಕ ಸಂಜಯ್ ಸಿಂಗ್ ಮಾತನಾಡುವಾಗ, ರಾಜ್ಯದಲ್ಲಿ ನಡೆದ ಉದ್ಯೋಗಕ್ಕಾಗಿ ನಗದು ಪ್ರಕರಣದ ಭ್ರಷ್ಟಚಾರದಲ್ಲಿ ಸುಲಕ್ಷಣಾ ಸಾವಂತ್ ಕೂಡ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಸುಲಕ್ಷಣಾ ಸಾವಂತ್ ಗೋವಾದ ಬಿಚೋಲಿಮ್‌ನಲ್ಲಿರುವ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗೀಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಂಜಯ್ ಸಿಂಗ್ ಅವರ ಹೇಳಿಕೆ ರಾಷ್ಟ್ರ ಮತ್ತು ಪ್ರಾದೇಶಿಕ ಸುದ್ದಿ ಸಂಸ್ಥೆ ಸೇರಿದಂತೆ ಯೂಟ್ಯೂಬ್ನಂತಹ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಪ್ರಸಾರವಾಗಿದ್ದು, ಗಮನಾರ್ಹ ವೀಕ್ಷಣೆ ಕಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಾವುದೇ ಸಾಕ್ಷಿ ಆಧಾರವಿಲ್ಲದೇ ಸುಳ್ಳು ಆರೋಪ ಮಾಡುವ ಮೂಲಕ ಸುಲಕ್ಷಣಾ ಸಾವಂತ್ ಅವರ ಸಮಗ್ರತೆ ಮತ್ತು ಸಾರ್ವಜನಿಕ ಪ್ರತಿಷ್ಟೆಗೆ ಹಾನಿ ಮಾಡಲಾಗಿದೆ. ಸಿಂಗ್ ಅವರ ಹೇಳಿಕೆಗಳು ಹಲವು ಬಾರಿ ಪ್ರಸಾರಗೊಂಡಿದ್ದವು ಎಂದು ಕೂಡ ದೂರಿನಲ್ಲಿ ತಿಳಿಸಿಲಾಗಿದೆ.