ಹಾವೇರಿ: ಹಾವೇರಿಗೆ ಬರುವ ನಗರವಾಸಿಗಳಿಗೆ ಸುಸಜ್ಜಿತ ಶೌಚಾಲಯಗಳಿಲ್ಲ. ಇದನ್ನರಿತ ನಗರಸಭೆ ನಗರದಲ್ಲಿ 7 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. ಇದರಲ್ಲಿ ಎರಡು ಶೌಚಾಲಯಗಳ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಆದರೂ ನಗರಸಭೆ ಆ ಎರಡು ಶೌಚಾಲಯಗಳನ್ನು ಉದ್ಘಾಟಿಸುತ್ತಿಲ್ಲ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಉಳಿದ ಐದು ಶೌಚಾಲಯಗಳನ್ನು ಸ್ವಚ್ಛ ಭಾರತ ಅಭಿಯಾನದಲ್ಲಿ ನಿರ್ಮಿಸಲಾಗುತ್ತಿದೆ. ಅವುಗಳು ಪೂರ್ಣಗೊಳ್ಳುವವರೆಗೆ ಈಗ ಕಾಮಗಾರಿ ಪೂರ್ಣಗೊಂಡಿರುವ ಶೌಚಾಲಯವನ್ನು ಉದ್ಘಾಟಿಸಲು ನಗರಸಭೆ ವಿಳಂಬ ಮಾಡುತ್ತಿದೆ ಎಂದು ನಗರಸಭೆ ಸದಸ್ಯರೇ ಹೇಳುತ್ತಿದ್ದಾರೆ. ಆದಷ್ಟು ಬೇಗ ನಗರಸಭೆ ಪೂರ್ಣಗೊಂಡಿರುವ ಶೌಚಾಲಯವನ್ನು ಉದ್ಘಾಟಿಸುವಂತೆ ಒತ್ತಾಯಿಸಿದ್ದಾರೆ.
"ಎರಡು ಶೌಚಾಲಯಗಳು ಪೂರ್ಣಗೊಂಡಿವೆ. ಇನ್ನು ಐದು ಶೌಚಾಲಯಗಳ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಸಾರ್ವಜನಿಕ ಶೌಚಾಲಯ ಉದ್ಘಾಟಿಸಲು ಅದರದೇ ನಿಯಮಗಳಿವೆ. ಅದಲ್ಲದೇ ಶೌಚಾಲಯಕ್ಕೆ ಚಾಲನೆ ನೀಡಬೇಕಾದ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ನಾನೂ ಸಹ ಹೆಣ್ಮಗಳು. ನನಗೆ ಹೆಣ್ಣುಮಕ್ಕಳ ಸಮಸ್ಯೆ ಗೊತ್ತಾಗುತ್ತದೆ. ಆದಷ್ಟು ಬೇಗ ಸಾರ್ವಜನಿಕ ಶೌಚಾಲಯ ಉದ್ಘಾಟಿಸುತ್ತೇವೆ. ಪ್ರತಿಪಕ್ಷದ ಸದಸ್ಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾವೂ ಸಹ ಸಾರ್ವಜನಿಕರ ಸೇವೆ ಮಾಡಲು ಬಂದಿದ್ದೇವೆ. ಸಾರ್ವಜನಿಕರ ಸಮಸ್ಯೆಗಳ ಅರಿವಿದೆ. ಶಾಸಕರ ಲಭ್ಯತೆಯ ದಿನ ನೋಡಿ ಸಾರ್ವಜನಿಕ ಶೌಚಾಲಯ ಉದ್ಘಾಟಿಸುತ್ತೇವೆ" ಎಂದು ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದರು.
ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು; ಅಧಿಕಾರಿಗಳ ವಿರುದ್ಧ ರೈತರ ಅಸಮಾಧಾನ