ನವದೆಹಲಿ: ಬಿ ಆರ್ ಅಂಬೇಡ್ಕರ್ ವಿರುದ್ಧ ಗೃಹ ಸಚಿವ ಅಮಿತ್ ಶಾ ಅವರು ಅವಮಾನಕರ ಹೇಳಿಕೆ ನೀಡಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಸಂಸದರು ಪಟ್ಟು ಹಿಡಿದ ಕಾರಣ, ಸಂಸತ್ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಗಿದೆ.
ಇಂದು ಸದನ ಆರಂಭವಾಗುತ್ತಿದ್ದಂತೆ, ಮಂಗಳವಾರ ಬಿಆರ್ ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಆಡಿದ ಮಾತುಗಳ ಕುರಿತು ಕಾಂಗ್ರೆಸ್ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ, ಈ ಹೇಳಿಕೆ ಸಂಬಂಧ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ , ಕಾಂಗ್ರೆಸ್ ಅಂಬೇಡ್ಕರ್ ಅನ್ನು ಯಾವಾಗಲೂ ಅವಮಾನಿಸಿದೆ. ಇದರಿಂದಲೇ ಲೋಕಸಭಾ ಚುನಾವಣೆಗೆ ಸೋಲು ಅನುಭವಿಸಿದರು. ಅಲ್ಲದೇ, ಕಾಂಗ್ರೆಸ್ ಇದೀಗ ಅಂಬೇಡ್ಕರ್ ಅವರನ್ನು ಗೌರವಿಸದಿದ್ದರೂ, ಅವರ ಹೆಸರನ್ನು ಒತ್ತಾಯ ಪೂರ್ವಕವಾಗಿ ತೆಗೆದುಕೊಳ್ಳುತ್ತಿದೆ ಎಂದು ಕುಟುಕಿದರು.
ಸದನದ ಗದ್ದಲಗಳ ನಡುವೆ, ಪ್ರಶ್ನೋತ್ತರ ಅವಧಿಯನ್ನು ಮುಂದುವರೆಸುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರನ್ನು ಕೇಳಿದರೂ, ಗದ್ದಲದ ನಡುವೆ ಅದು ಎರಡು ನಿಮಿಷ ಕೂಡ ಸಾಗದ ಹಿನ್ನೆಲೆ ಮಧ್ಯಾಹ್ನ 2ರವರೆಗೆ ಸದನ ಮುಂದೂಡಲಾಯಿತು.
ರಾಜ್ಯಸಭೆ ಕೂಡ ಮುಂದೂಡಿಕೆ: ರಾಜ್ಯ ಸಭೆಯಲ್ಲೂ ಸದಸ್ಯರು ಬಿಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದು, ಗದ್ದಲವಾದ ಪರಿಣಾಮ ಅಲ್ಲೂ ಕೂಡ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
ಇದನ್ನೂ ಓದಿ: ಲೋಕಸಭೆಯಲ್ಲಿ ಮಂಡನೆಯಾದ ಒಂದು ದೇಶ, ಒಂದು ಚುನಾವಣೆ ವಿಧೇಯಕ: ವಿಸ್ತೃತ ಚರ್ಚೆಗಾಗಿ ಜೆಪಿಸಿಗೆ ರವಾನೆ