ಬೆಂಗಳೂರು: "ಲೋಕಸಭೆ ಮಾದರಿಯಲ್ಲಿ ಸದನ ನಡೆಸಬೇಕೆಂದರೆ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿರುವ ಕೆ.ಹೆಚ್.ಮುನಿಯಪ್ಪರಂಥವರು ಸ್ಪೀಕರ್ ಆದರೆ ಉತ್ತಮ" ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಲೋಕಸಭೆ ರೀತಿಯಲ್ಲಿ ಈ ಸದನ ಶಿಸ್ತಿನಿಂದ ನಡೆಯಬೇಕು. ಮೊದಲು ಪ್ರಶ್ನೋತ್ತರ ಆಗಬೇಕು. ನೀವು ಹೊಸ ಬದಲಾವಣೆ ಮಾಡಬೇಕು. ಸದನದಲ್ಲಿ ಶಿಸ್ತು ತನ್ನಿ, ಈಗ ಶಿಸ್ತು ಇಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಕೋರಂ ಗಂಟೆ ಬಾರಿಸಿದೆ. ಯಾರೂ ಅದರ ಬಗ್ಗೆ ಗಮನಹರಿಸಿಲ್ಲ. ಸದನ ಶಿಸ್ತಿನಿಂದ ನಡೆಯುವಂತೆ ಬದಲಾವಣೆ ತರಬೇಕು" ಎಂದು ಮನವಿ ಮಾಡಿದರು.
ಇದಕ್ಕೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿ, "ನೀವು ಹೇಳುವುದು ಸರಿಯಾಗಿದೆ. ಲೋಕಸಭೆ ಮಾದರಿಯಲ್ಲೇ ನಮಗೂ ಸದನ ನಡೆಯಬೇಕೆಂಬ ಅಪೇಕ್ಷೆ ಇದೆ. ನಿಮ್ಮ ಸಲಹೆ ಸೂಚನೆಯನ್ನು ಒಪ್ಪುತ್ತೇನೆ. ಲೋಕಸಭೆಯಲ್ಲಿ ಸುದೀರ್ಘವಾಗಿ ಕೆಲಸ ಮಾಡಿರುವ ನಿಮ್ಮಂತಹ ಹಿರಿಯರು ಸಭಾಧ್ಯಕ್ಷರ ಪೀಠದಲ್ಲಿ ಕೂರಬೇಕು" ಎಂದರು.
ಆಗ ಪ್ರತಿಪಕ್ಷದ ನಾಯಕ ಆರ್.ಅಶೋಕ್, "ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಆಹ್ವಾನ ನೀಡುತ್ತಿರುವುದನ್ನು ನೋಡಿದರೆ ಮುಂದೆ ಸಚಿವರಾತ್ತೀರೇನೋ ಎಂಬ ಅನುಮಾನವಿದೆ" ಎಂದು ಖಾದರ್ ಅವರನ್ನು ಕೇಳಿದರು.
ಆಗ ಖಾದರ್, "ಹಾಗೇನಿಲ್ಲ, ನಾನು ಇಲ್ಲೇ ಇರುತ್ತೇನೆ" ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಐವಿ ದ್ರಾವಣ ಉತ್ಪಾದಿಸದಂತೆ ಪಶ್ಚಿಮ್ ಬಂಗಾ ಕಂಪನಿಗೆ ನಿರ್ಬಂಧ - ಸಚಿವ ದಿನೇಶ್ ಗುಂಡೂರಾವ್