ಪಟಿಯಾಲ(ಪಂಜಾಬ್):ಸಂತೋಷದಿಂದ ಕೂಡಿದ ಹುಟ್ಟುಹಬ್ಬದ ದಿನ ದುಃಖ ದಿನವಾಗಿ ಬದಲಾಗುತ್ತದೆ ಎಂದು ಅಲ್ಲಿ ಯಾರೂ ಊಹಿಸಿರಲಿಲ್ಲ. ಪಂಜಾಬ್‌ನ ಪಟಿಯಾಲದಲ್ಲಿ ಅಂಥದ್ದೊಂದು ಆಘಾತಕಾರಿ ಘಟನೆ ವರದಿಯಾಗಿದೆ. 10 ವರ್ಷದ ಬಾಲಕಿ ಹುಟ್ಟುಹಬ್ಬದ ಕೇಕ್ ತಿಂದು ಮೃತಪಟ್ಟಿದ್ದಾಳೆ.
ಘಟನೆಯ ಸಂಪೂರ್ಣ ವಿವರ: ಆನ್‌ಲೈನ್‌ನಲ್ಲಿ ಬರ್ತ್‌ಡೇ ಕೇಕ್ ಆರ್ಡರ್ ಮಾಡಲಾಗಿತ್ತು. ಈ ಕೇಕ್ ತಿಂದು ಬಾಲಕಿ ಸೇರಿ ಕುಟುಂಬದ ಇತರ ನಾಲ್ವರ ಆರೋಗ್ಯ ಹದಗೆಟ್ಟಿದೆ. ಅಸ್ವಸ್ಥರಾದ ಕುಟುಂಬಸ್ಥರನ್ನು ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಮೃತಪಟ್ಟಿದ್ದು ಉಳಿದವರಿಗೆ ಚಿಕಿತ್ಸೆ ನಡೆಯುತ್ತಿದೆ.
ಈ ಕುರಿತು ಅದಾಲತ್ ಬಜಾರ್‌ನಲ್ಲಿರುವ ಕೇಕ್ ಕನ್ಹಾ ಅಂಗಡಿಯವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 304-ಎ (ನರಹತ್ಯೆ) ಮತ್ತು 273 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರವೇ ಬಾಲಕಿ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇನ್ನೊಂದೆಡೆ, ನಮಗೆ ನ್ಯಾಯ ಒದಗಿಸಿಕೊಡಿ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕುಟುಂಬ ಮನವಿ ಸಲ್ಲಿಸಿದೆ.
ಅಮನ್ ನಗರದ ನಿವಾಸಿ ಕಾಜಲ್ ಅವರು ಮಾ.24ರ ಸಂಜೆ 6ಕ್ಕೆ ಆನ್‌ಲೈನ್ ಕಂಪನಿಯೊಂದರಿಂದ ಕೇಕ್ ಆರ್ಡರ್ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ''ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ಸಂಜೆ 6.30ರ ಸುಮಾರಿಗೆ ಮನೆ ತಲುಪಿತು. 7:15ಕ್ಕೆ ಕೇಕ್ ಕತ್ತರಿಸಿದೆವು. ಅದನ್ನು ಸೇವಿಸಿದ ಬಾಲಕಿ ಮಾನ್ವಿ ಹಾಗೂ ಇತರ ಕುಟುಂಬಸ್ಥರ ಸ್ಥಿತಿ ಹದಗೆಟ್ಟಿತು. ಎಲ್ಲರೂ ವಾಂತಿ ಮಾಡಿಕೊಂಡರು. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮರುದಿನ ಬೆಳಿಗ್ಗೆ 5.30ರ ಸುಮಾರಿಗೆ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು'' ಎಂದು ಅವರು ತಿಳಿಸಿದ್ದಾರೆ.
ಬಾಲಕಿಯ ಅಜ್ಜ ಹರ್ಬನ್ಸ್ ಲಾಲ್ ಮಾಧ್ಯಮಗಳೊಂದಿಗೆ ಮಾತನಾಡಿ, "ಬಾಲಕಿ ಇತ್ತೀಚೆಗೆ 5ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ತರಗತಿಯಲ್ಲಿ ಮಾನಿಟರ್ ಕೂಡಾ ಆಗಿದ್ದಳು. ಆಕೆಯ ಸಾವಿನ ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪಂಜಾಬ್ ಸರ್ಕಾರ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಕುಟುಂಬ ಮತ್ತೆ ಇಂತಹ ಸಮಸ್ಯೆ ಎದುರಿಸಬಾರದು. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನಮಗೆ ನ್ಯಾಯ ಒದಗಿಸಬೇಕು" ಎಂದು ಮನವಿ ಮಾಡಿದರು.
ಕೇಕ್ ಅಂಗಡಿ ಮಾಲೀಕನ ಪ್ರತಿಕ್ರಿಯೆ:''ನಾನು ಯಾವುದೇ ಕೇಕ್ ಅನ್ನು ಆನ್‌ಲೈನ್ ಕಂಪನಿ ಮೂಲಕ ಕಳುಹಿಸಿಲ್ಲ. ಕಂಪನಿಯು ಕಳುಹಿಸಿದ ಕೇಕ್ನ ಬಿಲ್‌ನಲ್ಲಿ ಅವರ ಜಿಎಸ್‌ಟಿ ಸಂಖ್ಯೆಯಾಗಲೀ ಅಥವಾ ಅವರ ಅಂಗಡಿಯ ಹೆಸರಾಗಲೀ ಇಲ್ಲ. ನಾನು ತನಿಖೆಗೆ ಸಹಕರಿಸುತ್ತೇನೆ. ಪೊಲೀಸರು ತಮ್ಮ ಜಿಎಸ್‌ಟಿ ನಂಬರ್ ಬರೆದು ತೆಗೆದುಕೊಂಡು ಹೋಗಿದ್ದಾರೆ" ಎಂದು ಕೇಕ್ ಅಂಗಡಿ ಮಾಲೀಕ ತಿಳಿಸಿದರು.
ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ, "ಮಾದರಿ ಪರೀಕ್ಷೆಯ ನಂತರವೇ ನಿಜವಾದ ಕಾರಣ ಗೊತ್ತಾಗುತ್ತದೆ. ಪೊಲೀಸರು ಆರೋಗ್ಯ ಇಲಾಖೆಯ ನೆರವು ಪಡೆಯಲಿದ್ದಾರೆ" ಎಂದರು.
ಇದನ್ನೂ ಓದಿ:ಹೆದ್ದಾರಿಯಲ್ಲಿ ಹಾಡಹಗಲೇ ಒಬ್ಬ ಯುವಕ, ಇಬ್ಬರು ಯುವತಿಯರ ಕಿಡ್ನಾಪ್: ನಾಳೆ ಲಂಡನ್ಗೆ ಹೋಗಬೇಕಿದ್ದ ಯುವಕ - Kidnap Case