ಕಾರವಾರ (ಉತ್ತರ ಕನ್ನಡ) : ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿಯಾದ ಘಟನೆಯಿಂದ 10 ಜನ ಅಸುನೀಗಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆ ಶಿಸ್ತುಕ್ರಮಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಡ್ಡಾಯವಾಗಿ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಉಲ್ಲಂಘನೆ ಕಂಡು ಬಂದಲ್ಲಿ ಕೇವಲ ದಂಡವಷ್ಟೇ ಅಲ್ಲದೆ ಪ್ರಕರಣವೂ ಸಹ ದಾಖಲಾಗಲಿದೆ.
ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಹೊತ್ತಯ್ಯದಂತೆ ಸರಕಾರದ ನಿರ್ದೇಶನ ಇದ್ದರೂ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಉತ್ತರಕನ್ನಡ ಜಿಲ್ಲೆ ಭೌಗೋಳಿಕವಾಗಿ ಸಾಕಷ್ಟು ವಿಸ್ತಾರವಾಗಿದ್ದು ಸಂಪರ್ಕ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಅದರಲ್ಲೂ ವ್ಯಾಪಾರ ವಹಿವಾಟು ಹೆಚ್ಚಾಗಿ ಹೊರ ಜಿಲ್ಲೆಯ ವ್ಯಾಪಾರಸ್ಥರಿಂದಲೇ ವ್ಯವಹರಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿನ ಜನ ಹೆಚ್ಚಾಗಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಾರಾದರೂ ಹೊರ ಜಿಲ್ಲೆಯಿಂದ ಬರುವ ವ್ಯಾಪಾರಸ್ಥರು ಹೆಚ್ಚು. ಅದರಲ್ಲೂ ಜಿಲ್ಲೆಯಲ್ಲಿ ನಡೆಯುವ ಸಂತೆ ವ್ಯಾಪಾರಕ್ಕೆ ಬರುವ ವ್ಯಾಪಾರಸ್ಥರು ಬಾಗಶ: ಹೊರ ಜಿಲ್ಲೆಯವರೇ ಆಗಿದ್ದಾರೆ. ತಾವು ತರುವ ಸರಕುಗಳ ಲಾರಿಯಲ್ಲಿ ಕೂರಲು ಸಹ ಸ್ಥಳವಕಾಶ ಇಲ್ಲದಷ್ಟು ಒಬ್ಬರಿಗೊಬ್ಬರು ಅಂಟಿಕೊಂಡು ಕುರಿಮುಂದೆಯಂತೆ ನಿಂತು ಸಾಗುತ್ತಾರೆ, ಇಲ್ಲವೆ ವಾಹನಕ್ಕೆ ಜೋತು ಬಿದ್ದು ಪ್ರಯಾಣಿಸುತ್ತಾರೆ. ಇದರಿಂದ ವಾಹನ ಚಾಲನೆಯ ಮೇಲೂ ಪರಣಾಮ ಬೀರುತ್ತಿದ್ದು, ನಿಯಂತ್ರಣಕ್ಕೆ ಸಿಗದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಅರಬೈಲ್ ಘಟ್ಟದಲ್ಲಿ ಬುಧವಾರ ನಡೆದ ಘಟನೆಯೇ ಸಾಕ್ಷಿಯಾಗಿದೆ. ಇದೇ ಮೊದಲ ಘಟನೆಯಲ್ಲದೆ ಈ ಹಿಂದೆಯೂ ಇದೇ ಮಾರ್ಗದಲ್ಲಿ ಸರಕು ತುಂಬಿದ ವಾಹನಗಳು ಪಲ್ಟಿಯಾಗಿ ಅದರಲ್ಲಿದ್ದ ಪ್ರಯಾಣಿಕರು ಉಸಿರು ಚೆಲ್ಲಿದ ಘಟನೆಗಳು ಹಲವಷ್ಟು ನಡೆದಿದೆ. ಆದರೆ ಈವರೆಗೂ ಸರಕು ವಾಹನಗಳಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಕಡಿವಾಣ ಬಿದ್ದಿರಲಿಲ್ಲ.
ಆದರೆ ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಅರಬೈಲ್ ಲಾರಿ ಪಲ್ಟಿ ಪ್ರಕರಣದಲ್ಲಿ ಲಾರಿಯಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ತುಂಬಿ ಸಂಪೂರ್ಣ ಭರ್ತಿಯಾಗಿದ್ದರೂ ಡ್ರೈವರ್, ಕ್ಲೀನರ್ ಸೇರಿದಂತೆ 28 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ. ಸಾಮಾನ್ಯವಾಗಿ ಒಂದು ಲಾರಿಯಲ್ಲಿ ಚಾಲಕ ಕ್ಲೀನರ್‌ಗೆ ಅಷ್ಟೇ ಅನುಮತಿ ಇದೆ. ಆದರೆ, ಇಲ್ಲಿ 28 ಪ್ರಯಾಣಿಕರು ಕುರಿಮುಂದೆಯಂತೆ ಲಾರಿಯಲ್ಲಿ ತೆರಳುತಿದ್ದದ್ದು ಅವಘಡದ ಗಂಭೀರತೆಗೆ ಸಾಕ್ಷಿಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಯೋಜನಾ ಪ್ರದೇಶಗಳಲ್ಲಿ ಕಾಮಗಾರಿಗೆ ಕೂಲಿ ಕಾರ್ಮಿಕರನ್ನು ಸಾಗಿಸಲು, ವಿವಾಹ ಮಹೋತ್ಸವ, ಇನ್ನಿತರ ಸಮಾರಂಭ ಕಾರ್ಯಕ್ರಮಗಳಿಗೆ ಮಿನಿ ಲಾರಿ, ಲಘು ಸರಕು ವಾಹನ ಸೇರಿದಂತೆ ದೊಡ್ಡ ಲಾರಿಯನ್ನು ಸಹ ಇನ್ನೂ ಬಳಸಲಾಗುತ್ತಿದೆ. ಆದರೆ ಈವರೆಗೂ ಇದಕ್ಕೆ ಕಡಿವಾಣ ಬಿದ್ದಿರಲಿಲ್ಲ. ಎಲ್ಲೋ ಒಂದೆರಡು ಪ್ರಕರಣಗಳು ಕಂಡು ಬಂದಲ್ಲಿ ದಂಡ ಹಾಕಿ ಬಿಟ್ಟು ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಇಷ್ಟಕ್ಕೆ ಬಿಡದೇ ಇಂತಹ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸುವುದು ಅಷ್ಟೇ ಅಲ್ಲದೆ ಫೋಟೋ ತೆಗೆದು ಸಾರ್ವಜನಿಕರ ಗಮನಕ್ಕೂ ತರಲು ಎಸ್ಪಿ ಎಮ್. ನಾರಾಯಣ ಆದೇಶ ಮಾಡಿದ್ದಾರೆ.
ಇನ್ನು ಮುಂದೆ ಗಸ್ತು ಅಧಿಕಾರಿಗಳಿಗೆ ಕಡ್ಡಾಯವಾಗಿ ವೆಪನ್ಸ್ ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸುವರು ಹಾಗೂ ನೈಟ್ ರೌಂಡ್ಸ್ ಗಸ್ತು ನಡೆಸುವ ಅಧಿಕಾರಿಗಳು ಕಡ್ಡಾಯವಾಗಿ ವೆಪನ್ಸ್ ಹೊಂದಿರಲು ಎಸ್ಪಿ ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನದಲ್ಲಿ ಜಿಲ್ಲೆಗೆ ಬರುವ ಅಪರಿಚಿತರ ಸಂಖ್ಯೆ ಹೆಚ್ಚಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರು ಇರುವ ಸಾಧ್ಯತೆ ಇರುತ್ತದೆ. ಅಲ್ಲದೆ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಮೇಲೆಯೇ ದರ್ಪ ಮೆರೆಯುವವರ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ ಅಧಿಕಾರಿಗಳ ಸುರಕ್ಷತೆ ದೃಷ್ಠಿಯಿಂದ ವೆಪನ್ಸ್ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ; ಯಲ್ಲಾಪುರ ಭೀಕರ ಅಪಘಾತ: ತಂದೆಗೆ ಎಳನೀರು ಕುಡಿಸಿ ಹೋದ ಮಗ ಮರಳಿದ್ದು ಶವವಾಗಿ!: ಹತ್ತೂ ಮೃತರದ್ದು ಒಂದೊಂದು ಕಥೆ..!!