ಹೈದರಾಬಾದ್ (ತೆಲಂಗಾಣ):ಸಮರ್ಪಣೆ, ದೃಢತೆ ಎಂಬುದು ಯಶಸ್ಸಿನ ಕೀಲಿ ಕೈ. ಇವುಗಳನ್ನು ಪಾಲಿಸಿದರೆ ಅಲ್ಲಿ ಸೋಲೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ ತೆಲಂಗಾಣ ರಾಜ್ಯದ ಯುವ ಸಾಧಕ. ಅನಂತರಾಮ್ ಗ್ರಾಮದ ರೈತಾಪಿ ಕುಟುಂಬದಿಂದ ಬಂದ ಗದ್ದಂ ರವಿ ಏಕಕಾಲದಲ್ಲಿ ಮೂರು ಸರ್ಕಾರಿ ನೌಕರಿಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಬಡತನ ಮತ್ತು ಟೀಕೆಗಳಿಗೆ ಅಂಜಿ ಕುಳಿತರೆ ಏನು ಆಗದು ಎಂಬುದನ್ನು ಅರಿತ ರವಿ ತಮ್ಮ ಪೋಷಕರ ಕನಸನ್ನು ನನಸು ಮಾಡಲು ಪಣ ತೊಟ್ಟು ಯಶಸ್ವಿಯಾಗಿದ್ದಾರೆ. ಸತತ ಏಳು ವರ್ಷಗಳ ಕಾಲದ ಅವಿರಹಿತ ಶ್ರಮ ಅವರಿಗೆ ಕೊನೆಗೂ ಸಾಧನೆಯ ಫಲ ನೀಡಿದೆ.
ಶಿಕ್ಷಣದಲ್ಲಿದ್ದ ಬದ್ಧತೆ ಮತ್ತು ಸಮರ್ಪಣೆಗಳಿಂದ ರವಿ ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ತಯಾರಿ ನಡೆಸಿದ್ದಾರೆ. ಈ ವೇಳೆ ಎದುರಾಗಿದ್ದ ಆರ್ಥಿಕ ಸವಾಲನ್ನು ಮೀರಿದ ಅವರು, ಇವ್ಯಾವು ತಮ್ಮ ಸಾಧನೆಗೆ ತೊಡಕು ಆಗದಂತೆ ನೋಡಿಕೊಂಡಿದ್ದಾರೆ. ಇದರ ಜೊತೆಗೆ ಅವರಿಗೆ ಕುಟುಂಬದ ಪ್ರೋತ್ಸಾಹ, ತಮ್ಮನ್ನು ತಾವು ಅಭಿವೃದ್ಧಿ ಪಡಿಸಿಕೊಳ್ಳುವ ಮನೋಭಾವದಿಂದ ಅವರು ಕಠಿಣ ತಪಸ್ಸನ್ನು ಮಾಡಿದ್ದಾರೆ. ಈ ನಡುವೆ ಎಂಜಿನಿಯರಿಂಗ್ ಮತ್ತು ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಪದವಿ ಪಡೆದಿದ್ದಾರೆ.