ಮಹೋಬಾ (ಉತ್ತರ ಪ್ರದೇಶ): ಜಿಲ್ಲೆಯ ಪರ್ವತದಲ್ಲಿ ಗಣಿಗಾರಿಕೆ ವೇಳೆ ಸ್ಫೋಟ ಸಂಭವಿಸಿ ಭಾರಿ ಅವಘಡ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸುಮಾರು 8 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಕಬ್ರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಪಹರಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಮಾಹಿತಿ ಪ್ರಕಾರ, ಇಂದು (ಮಂಗಳವಾರ) ಪರ್ವತದಲ್ಲಿ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಕಾರ್ಮಿಕರು ನಿಂತಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಅವಘಡದ ಸಮಯದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದರು. ಇದರಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಕಾರ್ಮಿಕರು ಅವಶೇಷಗಳಡಿ ಹೂತು ಹೋಗಿದ್ದರು. ಸ್ಫೋಟದ ಸದ್ದು ಕೇಳಿ ಸಮೀಪದ ಪಹರಾ ಗ್ರಾಮದ ಜನರು ಸ್ಥಳಕ್ಕೆ ಧಾವಿಸಿ ಕಾರ್ಮಿಕರನ್ನು ಹೊರ ತೆಗೆದಿದ್ದಾರೆ.