ವಾರಾಣಸಿ, ಉತ್ತರಪ್ರದೇಶ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್(92) ಅವರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ವಾರಾಣಸಿಗೆ ಎರಡು ಬಾರಿ ಭೇಟಿ ನೀಡಿದ್ದು ವಿಶೇಷ. ತಮ್ಮ ಪತ್ನಿಯೊಂದಿಗೆ ವಾರಾಣಸಿಯ ಬಾಬಾ ವಿಶ್ವನಾಥ ದೇವಸ್ಥಾನಕ್ಕೆ ಆಗಮಿಸಿದ್ದ ಅವರು, ಸನ್ನಿಧಿಯಲ್ಲಿ 40 ನಿಮಿಷಕ್ಕೂ ಹೆಚ್ಚು ಕಾಲ ಪೂಜೆ ಸಲ್ಲಿಸಿದ್ದು ಅಚ್ಚಳಿಯದ ನೆನಪು.
ಬನಾರಸ್ನ ಕಾಶಿ ಹಿಂದೂ ವಿಶ್ವವಿದ್ಯಾಲಯದ 90ನೇ ಘಟಿಕೋತ್ಸವ ಸಮಾರಂಭದ ನಿಮಿತ್ತ 2008ರ ಮಾರ್ಚ್ 14 ಮತ್ತು 15 ರಂದು ಎರಡು ದಿನಗಳ ಪ್ರವಾಸ ನಿಮಿತ್ತ ವಾರಾಣಸಿಗೆ ಆಗಮಿಸಿದ್ದ ಸಿಂಗ್ ಅವರು, ಹಲವು ವಿದ್ಯಮಾನಕ್ಕೆ ಸಾಕ್ಷಿಯಾದವರು. ಘಟಿಕೋತ್ಸವಕ್ಕೂ ಮುನ್ನ ಕಾಶಿಯ ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗವಹಿಸಿ ಎಲ್ಲ ಭಕ್ತರಂತೆ ತಾವು ಓರ್ವ ಭಕ್ತ ಎಂದು ತೋರಿಸಿಕೊಟ್ಟಿದ್ದರು. ಇದೇ ವೇಳೆ ಪತ್ನಿಯೊಂದಿಗೆ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಿದ್ದ ಅವರು, ದೇವರ ದರ್ಶನದ ಪಡೆದು ಅಲ್ಲಿ 40 ನಿಮಿಷಕ್ಕೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದ್ದರು ಅನ್ನೋದು ಆಗಿನ ಮಾತು.
ಅತ್ಯಂತ ಸರಳ ಜೀವಿ ಮನಮೋಹನ್ ಸಿಂಗ್:'ಸಿಂಗ್ ಅತ್ಯಂತ ಸರಳ ಜೀವಿ. ಪ್ರಧಾನಿ ಹುದ್ದೆಗೇರಿದ ಬಳಿಕವೂ ಅತ್ಯಂತ ಸರಳತೆಯಿಂದ ಇದ್ದವರು. ಎಲ್ಲಿ ಬೇಕಾದರೂ ಯಾವ ಕ್ಷಣದಲ್ಲಾದರೂ ಇರುತ್ತಿದ್ದರು. ಇವರ ಅಧಿಕಾರಾವಧಿಯಲ್ಲಿ ಮಾರ್ಚ್ 7, 2006 ರಂದು, ವಾರಾಣಸಿಯ ಕ್ಯಾಂಟ್ ಮತ್ತು ಸಂಕಟ್ ಮೋಚನ್ ದೇವಾಲಯದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಮರುದಿನ ಮಾರ್ಚ್ 8 ರಂದು ಬೆಳಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಾರಣಾಸಿ ನಿಲ್ದಾಣವನ್ನು ತಲುಪಿದ್ದರು. ಇಲ್ಲಿ ತಪಾಸಣೆ ನಡೆಸಿದ ನಂತರ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ಇಲ್ಲಿಂದ ನಿರ್ಗಮಿಸಿದ್ದರು' ಎಂದು ಕಾಂಗ್ರೆಸ್ನ ಮಾಜಿ ಜಿಲ್ಲಾಧ್ಯಕ್ಷ ಪ್ರಜಾನಾಥ ಶರ್ಮಾ ಅವರು ಅಂದು ನಡೆದ ಘಟನಾವಳಿಗಳನ್ನು ನೆನಪು ಮಾಡಿಕೊಂಡರು.