ಅಯೋಧ್ಯೆ:ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಅಯೋಧ್ಯಾ ನಗರಿ ಸಜ್ಜಾಗಿದೆ. ಭವ್ಯ ದೇಗುಲವೂ ಸೇರಿದಂತೆ ಇಡೀ ನಗರ ಬಗೆಬಗೆಯ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಈ ಅಲಂಕಾರಕ್ಕಾಗಿ 9 ಟನ್ ಹೂವುಗಳನ್ನು ಬಳಸಲಾಗಿದೆ.
ನಗರದ ವಿವಿಧೆಡೆ ಆಕರ್ಷಕ ಅಲಂಕಾರಕ್ಕೆ ಗುಲಾಬಿ, ಚೆಂಡು ಹೂವು, ಸುಗಂಧರಾಜ, ಸೇವಂತಿಗೆ, ಆರ್ಕಿಡ್ ಸೇರಿದಂತೆ ಹಲವು ಹೂವುಗಳನ್ನು ಬಳಕೆ ಮಾಡಲಾಗಿದೆ. ಒಟ್ಟಾರೆ 10 ಟನ್ ಹೂವುಗಳು ಅಯೋಧ್ಯೆ ತಲುಪಿವೆ. ಇದರಲ್ಲಿ 100 ಬಾಕ್ಸ್ ಸೇವಂತಿಗೆ, 50ರಿಂದ 60 ಬಾಕ್ಸ್ ಆರ್ಕಿಡ್, 20ರಿಂದ 25 ಬಾಕ್ಸ್ ಆಂಥೂರಿಯಂ ಮತ್ತು ಕೋಲ್ಕತ್ತಾದಿಂದ ಚೆಂಡು ಹೂವು ಸೇರಿದಂತೆ ಹಲವೆಡೆಗಳಿಂದ ಹೂವಿನ ಪೆಟ್ಟಿಗೆಗಳು ಬಂದಿವೆ. ಅಷ್ಟೇ ಅಲ್ಲದೇ ಇಲ್ಲಿನ ಹಪುರ್ ಜಿಲ್ಲೆಯಲ್ಲೂ ಕೂಡ ಸಾಕಷ್ಟು ಹೂವುಗಳನ್ನು ಬೆಳೆಯಲಾಗುತ್ತಿದ್ದು, ಅದನ್ನೂ ಬಳಸಲಾಗುತ್ತಿದೆ.
ನೂರಾರು ಮಹಿಳೆಯರಿಗೆ ಉದ್ಯೋಗ:ಪ್ರಾಣಪ್ರತಿಷ್ಠಾಪನೆ ಹೂವಿನ ಅಲಂಕಾರ ಮತ್ತು ಹಾರ ಜೋಡಣೆಯಂತಹ ಕಾರ್ಯಕ್ಕೆ ನೂರಾರು ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳಿಗೆ ಉದ್ಯೋಗ ಸೃಷ್ಟಿಯಾಗಿದೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಬಳಿಕ ಈ ಹೂವಿನ ತ್ಯಾಜವನ್ನು ಮರುಬಳಕೆ ಮಾಡಲಾಗುವುದು ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪ ಮುಖ್ಯಸ್ಥ ವಿಶಾಲ್ ಸಿಂಗ್ ತಿಳಿಸಿದ್ದಾರೆ.