ನವದೆಹಲಿ: ವಿವಾಹ ಮಾಡಿಕೊಳ್ಳುವ ಮುನ್ನ ವಧು ಹಾಗೂ ವರನ ಕುಟುಂಬಸ್ಥರು ಪರಸ್ಪರರ ಹಿನ್ನೆಲೆಗಳ ಬಗ್ಗೆ ಪರಿಶೀಲನೆ ನಡೆಸುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಆದರೆ ಇದೀಗ ಇದಕ್ಕಾಗಿಯೇ ಮೀಸಲಾದ ಕುಟುಂಬಗಳ ಹಿನ್ನೆಲೆಯನ್ನು ಪರಿಶೀಲಿಸುವ ಏಜೆನ್ಸಿಗಳು ತಲೆ ಎತ್ತುತ್ತಿರುವುದು ಹೊಸ ಬೆಳವಣಿಗೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಮದುವೆಯೊಂದನ್ನು ನಿರ್ಧರಿಸುವ ಮುನ್ನ ಭಾರತೀಯ ಕುಟುಂಬಗಳು ದಿನಾಂಕ, ಕುಂಡಲಿ ನೋಡಲು ಪುರೋಹಿತರ ಮೊರೆ ಹೋಗುವ ಮುನ್ನ ಇಂಥ ಗೂಢಚಾರ ಏಜೆನ್ಸಿಗಳನ್ನು ಸಂಪರ್ಕಿಸುತ್ತಿವೆ. ಹೀಗಾಗಿ ಜೀವನ ಸಂಗಾತಿಯ ಬಗ್ಗೆ, ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಹೈಟೆಕ್ ಗೂಢಚಾರ ಸಾಧನಗಳನ್ನು ಹೊಂದಿರುವ ಏಜೆನ್ಸಿಗಳ ಪಾತ್ರ ಮುಖ್ಯವಾಗುತ್ತಿದೆ.
ಈ ಬಗ್ಗೆ ಮಾತನಾಡಿದ ನವದೆಹಲಿಯ ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುವ ಶೀಲಾ ಎಂಬವರು ತನ್ನ ಮಗಳು ತನ್ನ ಗೆಳೆಯನನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ ನಂತರ ತಾವು ಮೊದಲಿಗೆ ಪಾಲಿವಾಲ್ ಎಂಬವರ ಏಜೆನ್ಸಿಯನ್ನು ಸಂಪರ್ಕಿಸಿದ್ದಾಗಿ ಹೇಳಿದರು.
"ನನ್ನ ವೈವಾಹಿಕ ಜೀವನ ಸುಖವಾಗಿರಲಿಲ್ಲ. ನನ್ನ ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಗೊತ್ತಾದಾಗ ಆಕೆಯ ನಿರ್ಧಾರವನ್ನು ಬೆಂಬಲಿಸಲು ಬಯಸಿದೆ. ಆದರೆ ಹಿನ್ನೆಲೆ ಮುನ್ನೆಲೆಯನ್ನು ತಿಳಿಯದೇ ನಾನು ಅವಳ ವಿವಾಹಕ್ಕೆ ಒಪ್ಪಿಗೆ ಕೊಡುವುದು ಸಾಧ್ಯವಿರಲಿಲ್ಲ." ಎಂದರು.
ಎರಡು ದಶಕಗಳ ಹಿಂದೆ ತೇಜಸ್ ಡಿಟೆಕ್ಟಿವ್ ಏಜೆನ್ಸಿಯನ್ನು ಸ್ಥಾಪಿಸಿದ 48 ವರ್ಷದ ಮಹಿಳೆ ಪಲಿವಾಲ್, ತಮ್ಮ ವ್ಯವಹಾರವು ಹಿಂದೆಂದಿಗಿಂತಲೂ ಉತ್ತಮವಾಗಿದೆ ಎಂದು ಹೇಳುತ್ತಾರೆ. ಅವರ ತಂಡವು ತಿಂಗಳಿಗೆ ಸುಮಾರು ಎಂಟು ಪ್ರಕರಣಗಳನ್ನು ನಿರ್ವಹಿಸುತ್ತಿದೆ.
ಇತ್ತೀಚಿನ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ತನ್ನ ಭಾವಿ ಪತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೋರಿದ್ದರು. ವರ್ಷಕ್ಕೆ 70,700 ಡಾಲರ್ ಸಂಬಳ ಪಡೆಯುತ್ತಿರುವುದಾಗಿ ಅವರ ಭಾವಿ ಪತಿ ಹೇಳಿಕೊಂಡಿದ್ದರು. ಆದರೆ ಸೂಕ್ತವಾಗಿ ಪರಿಶೀಲನೆ ಮಾಡಿದಾಗ ಆತ ಕೇವಲ 7,070 ಡಾಲರ್ ಸಂಬಳ ಪಡೆಯುತ್ತಿರುವುದು ಕಂಡು ಬಂದಿದೆ ಎಂದು ಪಲಿವಾಲ್ ಹೇಳಿದರು.
ಇದೊಂದು ರಹಸ್ಯವಾಗಿ ಮಾಡಬೇಕಾದ ಕೆಲಸವಾಗಿದೆ. ಹೀಗಾಗಿ ಪಾಲಿವಾಲ್ ಅವರ ಕಚೇರಿ ನಗರದ ಹೊರವಲಯದ ಮಾಲ್‌ವೊಂದರಲ್ಲಿದೆ. ಕಚೇರಿ ಮೇಲೆ ಜ್ಯೋತಿಷ್ಯ ಕೇಂದ್ರ ಎಂದು ಬೋರ್ಡ್ ಹಾಕಲಾಗಿದೆ. ಈ ಬಗ್ಗೆ ಮಾತನಾಡಿದ ಪಲಿವಾಲ್, ಅನೇಕ ಬಾರಿ ನನ್ನ ಗ್ರಾಹಕರು ತಾವು ಪತ್ತೇದಾರಿ ಸಂಸ್ಥೆಯೊಂದರ ಮೊರೆ ಹೋಗಿರುವುದು ಗುಪ್ತವಾಗಿರಲಿ ಎಂದು ಬಯಸುತ್ತಾರೆ ಎಂದು ನಕ್ಕರು.
ಪತ್ತೇದಾರಿಯನ್ನು ನೇಮಿಸಿಕೊಳ್ಳಲು ಅಗತ್ಯವಿರುವ ಕಣ್ಗಾವಲಿನ ವ್ಯಾಪ್ತಿಯನ್ನು ಅವಲಂಬಿಸಿ $100 ರಿಂದ $2,000ವರೆಗೆ ಶುಲ್ಕ ವಿಧಿಸಲಾಗುತ್ತದೆ. ಮದುವೆಯ ದಿನವೇ ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಖರ್ಚು ಮಾಡುವ ಕುಟುಂಬಗಳಿಗೆ ಇದೊಂದು ಸಣ್ಣ ವೆಚ್ಚವಾಗಿದೆ.
ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಭಾವಿ ಅಳಿಯ ಅಥವಾ ಭಾವಿ ಸೊಸೆಯ ಹಿನ್ನೆಲೆಯ ಬಗ್ಗೆ ಮಾತ್ರ ಚಿಂತಿತರಾಗಿಲ್ಲ. ಅನೇಕ ಬಾರಿ ಮದುವೆಯ ನಂತರವೂ ಕೆಲವರು ನಮ್ಮ ಬಳಿಗೆ ಬರುತ್ತಾರೆ. ಸಾಮಾನ್ಯವಾಗಿ ಅನೈತಿಕ ಸಂಬಂಧವೇನಾದರೂ ಇದೆಯಾ ಎಂಬುದನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿರುತ್ತದೆ ಎನ್ನುತ್ತಾರೆ ಮತ್ತೋರ್ವ ಪತ್ತೇದಾರಿ ಸಂಸ್ಥೆಯ ಸಂಜಯ್ ಸಿಂಗ್.
ಈ ಬಗ್ಗೆ ಮಾತನಾಡಿದ ಪತ್ತೇದಾರಿ ಸಂಸ್ಥೆಯ ಆಕೃತಿ ಖತ್ರಿ, "ತಮ್ಮ ವೀನಸ್ ಡಿಟೆಕ್ಟಿವ್ ಏಜೆನ್ಸಿಯಲ್ಲಿ ಸುಮಾರು ಕಾಲು ಭಾಗದಷ್ಟು ಪ್ರಕರಣಗಳು ವಿವಾಹಪೂರ್ವ ತಪಾಸಣೆಗಳಾಗಿವೆ" ಎಂದು ಹೇಳಿದರು. ವರನು ಸಲಿಂಗಕಾಮಿಯೇ ಎಂದು ತಿಳಿಯಲು ಬಯಸುವ ಜನರಿದ್ದಾರೆ ಎಂದು ಉದಾಹರಣೆಯೊಂದನ್ನು ಉಲ್ಲೇಖಿಸಿ ಅವರು ಹೇಳಿದರು.
ಎರಡು ಕುಟುಂಬಗಳನ್ನು ಒಟ್ಟಿಗೆ ಬೆಸೆಯುವ ವಿವಾಹವೊಂದು ನಡೆಯುವ ಮುನ್ನ ಹಲವಾರು ವಿಷಯಗಳನ್ನು ಪರಿಶೀಲಿಸಬೇಕಾಗುತ್ತದೆ. ಕುಟುಂಬದ ಹಣಕಾಸಿನ ಸ್ಥಿತಿ, ಭಾರತೀಯ ಸಂಪ್ರದಾಯದಲ್ಲಿ ಅವರ ಕುಟುಂಬದ ಜಾತಿಯ ಮೂಲ ಹೀಗೆ ಹಲವಾರು ವಿಷಯಗಳಿರುತ್ತವೆ. ಕಟ್ಟುನಿಟ್ಟಾದ ಜಾತಿ ಅಥವಾ ಧಾರ್ಮಿಕ ವಿಷಯಗಳಿಂದಾಗಿ ವಿವಾಹಗಳು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಕೆಲವೊಮ್ಮೆ ಮರ್ಯಾದೆಗೇಡು ಹತ್ಯೆಗೂ ಕಾರಣವಾಗಬಹುದು.
ಹಿಂದಿನ ಕಾಲದಲ್ಲಿ ಇಂತಹ ವಿವಾಹಪೂರ್ವ ತಪಾಸಣೆಗಳನ್ನು ಹೆಚ್ಚಾಗಿ ಕುಟುಂಬ ಸದಸ್ಯರು, ಪುರೋಹಿತರು ಅಥವಾ ವೃತ್ತಿಪರ ಮ್ಯಾಚ್ ಮೇಕರ್‌ಗಳು ಮಾಡುತ್ತಿದ್ದರು. ಆದರೆ ವಿಶಾಲವಾದ ಮಹಾನಗರಗಳಲ್ಲಿನ ನಗರೀಕರಣವು ಸಾಮಾಜಿಕ ನೆಟ್ವರ್ಕ್ಗಳನ್ನು ಬದಲಾಯಿಸಿದೆ. ಮದುವೆ ಪ್ರಸ್ತಾಪಗಳನ್ನು ಪರಿಶೀಲಿಸುವ ಸಾಂಪ್ರದಾಯಿಕ ವಿಧಾನಗಳಿಗೆ ಸವಾಲು ಹಾಕಿದೆ. ವ್ಯವಸ್ಥಿತ ವಿವಾಹಗಳು ಈಗ ಮ್ಯಾಚ್ ಮೇಕಿಂಗ್ ವೆಬ್‌ಸೈಟ್‌ಗಳು ಅಥವಾ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕವೂ ಆನ್‌ಲೈನ್‌ನಲ್ಲಿ ನಡೆಯುತ್ತವೆ. ಮದುವೆ ಪ್ರಸ್ತಾಪಗಳು ಟಿಂಡರ್‌ನಲ್ಲಿಯೂ ಬರುತ್ತವೆ ಎಂದು ಸಿಂಗ್ ಹೇಳಿದರು.