ತುಮಕೂರು: "ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಓರ್ವ ಬುದ್ಧಿವಂತ ರಾಜಕಾರಣಿ. ಅವರು ಆ ರೀತಿ ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ" ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ವಿಧಾನ ಪರಿಷತ್‌ನಲ್ಲಿ ಸಭಾಪತಿಗಳು ಎಷ್ಟು ಕಸ್ಟಡಿಯನ್ನೋ ಅದೇ ರೀತಿ ಲೋಕಸಭೆಯಲ್ಲಿ ನಮ್ಮ ಸ್ಪೀಕರ್ ಸಹ ಅಷ್ಟೇ ಕಸ್ಟೋಡಿಯನ್. ಹಾಗಾಗಿ ಸಭಾಪತಿಗಳೇ ತೀರ್ಮಾನ ಮಾಡುತ್ತಾರೆ. ಅವರು ಏನು ತೀರ್ಮಾನ ಕೊಟ್ಟಿದ್ದಾರೋ ಸರಿಯಾಗಿ ನನಗೆ ಗೊತ್ತಿಲ್ಲ" ಎಂದರು.
"ಸಿ.ಟಿ.ರವಿ ಅವರನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿ ಮಾನಸಿಕ ಹಿಂಸೆ ನೀಡಿದ್ದು ಸರಿ ಅಲ್ಲ. ಅದು ಯಾವುದೇ ನಾಗರಿಕ ಸರ್ಕಾರಕ್ಕೆ ಗೌರವ ತರುವುದಿಲ್ಲ" ಎಂದು ಹೇಳಿದರು.
ಕಳೆದ ಎರಡು ದಿನಗಳ ಹಿಂದೆ ನೆಲಮಂಗಲದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಕಾರಿನ ಮೇಲೆ ಬಿದ್ದು ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿ, "ಬೆಂಗಳೂರು ಮತ್ತು ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದಾಗ ಆದ ತೊಂದರೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೇನೆ. ಈ ಕುರಿತು ಸವಿಸ್ತಾರವಾಗಿ ಪತ್ರವನ್ನೂ ಬರೆದಿದ್ದೇನೆ. ಎಷ್ಟು ಕಾಮಗಾರಿ ಆಗಿವೆ ಎಂಬುದರ ಬಗ್ಗೆಯೂ ತಿಳಿಸಿದ್ದೇನೆ" ಎಂದು ತಿಳಿಸಿದರು.
"ನವೆಂಬರ್ 20ರಂದು ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಹೆದ್ದಾರಿಯ ಬಗ್ಗೆ ಗಮನ ಹರಿಸಲಾಗಿತ್ತು. ನಮ್ಮ ಅಧಿಕಾರಿಗಳು ಹೆದ್ದಾರಿ ಬಗ್ಗೆ ವರದಿ ನೀಡಿದ್ದರು. ಕಳೆದ ಮೂರು ವರ್ಷದಲ್ಲಿ ಈ ಹೆದ್ದಾರಿಯಲ್ಲಿ 256 ಜನ ಮೃತಪಟ್ಟ ಮಾಹಿತಿ ಇದೆ. ಇದುವರೆಗೂ ಎಲ್ಲೆಲ್ಲಿ ಅಪಘಾತಗಳು ಆಗುತ್ತಿದ್ದವೋ ಅದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಜನವರಿ 2ರಿಂದ ನೆಲಮಂಗಲದಿಂದ ತುಮಕೂರಿನ ಊರುಕೆರೆವರೆಗೆ 6 ಪಥದ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ. ಯುದ್ದೋಪಾದಿಯಲ್ಲಿ ಕಾಮಗಾರಿ ನಡೆಸಿ ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ಹೇರಿದ್ದೇನೆ" ಎಂದು ಮಾಹಿತಿ ನೀಡಿದರು.
"ನೆಲಮಂಗಲದಿಂದ 45 ಕಿ.ಮೀ. ಹೊರಗಿನ ರಸ್ತೆಗೆ 2,046 ಕೋಟಿ ರೂ. ಅನುಮೋದನೆ ದೊರೆತಿದೆ. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರ ಅರ್ಧಕ್ಕೆ ಬಿಟ್ಟು ಹೋಗುವ ಸ್ಥಿತಿಯಲ್ಲಿದ್ದ. ಈ ಬಗ್ಗೆಯೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇವೆ. ಅವರು ಗುತ್ತಿಗೆದಾರನನ್ನು ಕರೆಸಿ ಮಾತನಾಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದರು.