ಉಳ್ಳಾಲ(ಮಂಗಳೂರು): ಅಪಘಾತದಲ್ಲಿ ಮೃತಪಟ್ಟ ಯುವಕನ ಅಸ್ಥಿ (ಮೂಳೆ) ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ್ ಶೆಟ್ಟಿ ನೇತೃತ್ವದಲ್ಲಿ ಅಪರೂಪದ ದಾನವನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿದೆ.
ಇದರಿಂದ ಕ್ಯಾನ್ಸರ್‌ಪೀಡಿತ 6 ಮಕ್ಕಳ ಕಾಲುಗಳನ್ನು ಉಳಿಸಬಹುದು ಎಂದು ಅಸ್ಥಿ ಸಂಗ್ರಹಿಸಿದ ಬಳಿಕ ಡಾ.ಶೆಟ್ಟಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಾವನ್ನಪ್ಪಿದ ವ್ಯಕ್ತಿಯ ಅಸ್ಥಿ ಸಂಗ್ರಹಿಸಲಾಗಿದ್ದು, ರಾಜ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಹೊಸ ಮೈಲಿಗಲ್ಲು ಎಂದು ವೈದ್ಯರ ತಂಡ ತಿಳಿಸಿದೆ.
ಜಂಬೂರು ಗ್ರಾಮದ ಸೋಮವಾರಪೇಟೆ ನಿವಾಸಿ ಈಶ್ವರ್ ಎನ್ (32) ಅವರಿಗೆ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ, ಭಾನುವಾರ ಬೆಳಗ್ಗೆ 10 ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟರು. ಈಶ್ವರ್ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರ ಸಹೋದರಿ, ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ನಂತರ ಸಹೋದರನ ಅಸ್ಥಿಗಳನ್ನು ದಾನ ಮಾಡಲು ಮುಂದಾದರು.
ಆಸ್ಪತ್ರೆಯ ಸಂಯೋಜಕಿ ಅಕ್ಷತಾ ಶೆಟ್ಟಿ ಮಾರ್ಗದರ್ಶನದಲ್ಲಿ, ಕುಟುಂಬದ ಎಲ್ಲ ಸದಸ್ಯರಿಗೂ ದಾನದ ಮಹತ್ವ ವಿವರಿಸಲಾಯಿತು. ಬಳಿಕ ಕುಟುಂಬ, ದಾನಕ್ಕೆ ಒಪ್ಪಿಗೆ ನೀಡಿದೆ. ಇದು ನ್ಯಾಯಾಂಗ ಪ್ರಕರಣವಾಗಿರುವುದರಿಂದ ಅಗತ್ಯ ಪೊಲೀಸ್ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಆರಂಭಿಸಲಾಯಿತು. ಡಾ.ವಿಕ್ರಮ್ ಶೆಟ್ಟಿ ನೇತೃತ್ವದಲ್ಲಿ, ಅಸ್ಥಿ ಸಂಗ್ರಹ ಕಾರ್ಯವನ್ನು ಶುದ್ಧ ಪರಿಸರದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
ಡಾ.ವರುಣ್ ಶೆಟ್ಟಿ, ಡಾ.ಶ್ರಿದಿಶ್ ನಂಬಿಯಾರ್ ಮತ್ತು ಟಿಷ್ಯೂ ಬ್ಯಾಂಕ್ ತಂಡದ ನೆರವಿನಿಂದ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಅಸ್ಥಿ ದಾನ ಹತಾಶ ಯುವ ರೋಗಿಗಳಿಗೆ ಹೊಸ ಆಶಾಕಿರಣ ನೀಡುತ್ತದೆ ಎಂದು ಡಾ.ವರುಣ್ ಶೆಟ್ಟಿ ಹೇಳಿದರು.
ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಶೆಟ್ಟಿ, ದಾನದ ಮಹತ್ವ ಮತ್ತು ಕುಟುಂಬದ ಸಹಕಾರವನ್ನು ಇದೇ ವೇಳೆ ಪ್ರಶಂಸಿದರು.
ಟಿಷ್ಯೂ ಬ್ಯಾಂಕ್ ಮೂಲಕ ನಡೆಯುತ್ತಿರುವ ದಾನ ಪ್ರಕ್ರಿಯೆಗಳು ಬಾಧಿತರ ಜೀವನ ಗುಣಾತ್ಮಕತೆಯನ್ನು ಹೆಚ್ಚಿಸುತ್ತವೆ. ಈ ಅಸ್ಥಿ ದಾನವು ದೇಹಾಂಗಗಳ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿಸಲು ಪ್ರೇರಣೆಯಾಗಲಿದೆ ಎಂದು ಪ್ರೊ. ಶಾಂತಾರಾಮ ಶೆಟ್ಟಿ ಹೇಳಿದರು.
ಇದನ್ನೂ ಓದಿ: ಬೆಳಗಾವಿ: ನವಜಾತ ಶಿಶು ಬಿಟ್ಟು ಬಾಣಂತಿ ಪರಾರಿ; ಚಿಕಿತ್ಸೆ ಫಲಿಸದೇ ಶಿಶು ಸಾವು - MOTHER ESCAPED AFTER DELIVERY