ಶ್ರೀನಗರ: ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಸ್ತ್ರ ಸಂಹಿತೆ ನಿಯಮಗಳ ಪ್ರಕಾರ ಮಹಿಳಾ ವಕೀಲರು ಬುರ್ಖಾ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಆದೇಶಿಸಿದೆ.
ಡಿ.13ರಂದು ಸೈಯದ್ ಐನೈನ್ ಖಾದ್ರಿ ಎಂದು ಪರಿಚಯಿಸಿಕೊಂಡ ಮಹಿಳಾ ವಕೀಲರೊಬ್ಬರು ಮುಖ ಮುಚ್ಚಿಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಲು ಹಾಜರಾಗಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ, ಬುರ್ಖಾ ಧರಿಸಿ ನ್ಯಾಯಾಲಯದಲ್ಲಿ ಹಾಜರಾಗುವಂತಿಲ್ಲ ಎಂದು ಹೇಳಿತು.
'ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ'-ಬುರ್ಖಾ ತೆಗೆಯಲು ನಿರಾಕರಿಸಿದ ವಕೀಲೆ: ಕೌಟುಂಬಿಕ ಹಿಂಸಾಚಾರದ ದೂರು ರದ್ದುಗೊಳಿಸುವಂತೆ ಕೋರಿದ ಪ್ರಕರಣದಲ್ಲಿ ತಾನು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಅವರು ನ್ಯಾಯಾಲಯಕ್ಕೆ ಹೇಳಿದರು. ಆದರೆ ಬುರ್ಖಾ ತೆಗೆದು ವಾದ ಮಂಡಿಸುವಂತೆ ನ್ಯಾಯಮೂರ್ತಿ ರಾಹುಲ್ ಭಾರತಿ ಸೂಚಿಸಿದಾಗ, ಅದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಬುರ್ಖಾ ತೆಗೆಯಲು ನಿರಾಕರಿಸಿದ್ದರು. ಹೀಗಾಗಿ ಮಹಿಳಾ ವಕೀಲರ ಗುರುತು ಪರಿಚಯಗಳನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗದ್ದರಿಂದ ನ್ಯಾಯಾಲಯ ಆಕೆ ವಾದ ಮಂಡನೆ ಮಾಡದಂತೆ ನಿರ್ಬಂಧಿಸಿತು.
"ವ್ಯಕ್ತಿಯಾಗಿ ಮತ್ತು ವೃತ್ತಿಪರವಾಗಿ ಅವರ ನಿಜವಾದ ಗುರುತನ್ನು ದೃಢೀಕರಿಸಲು ಈ ನ್ಯಾಯಾಲಯಕ್ಕೆ ಸಾಧ್ಯವಾಗದಿರುವುದರಿಂದ ತನ್ನನ್ನು ವಕೀಲೆ ಸೈಯದ್ ಐನೈನ್ ಖಾದ್ರಿ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯು ಅರ್ಜಿದಾರರ ವಕೀಲರೆಂದು ಈ ನ್ಯಾಯಾಲಯವು ಪರಿಗಣಿಸುವುದಿಲ್ಲ." ಎಂದು ನ್ಯಾಯಮೂರ್ತಿ ಭಾರತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತರುವಾಯ ಪ್ರಕರಣವನ್ನು ಮುಂದೂಡಿದ ನ್ಯಾಯಾಲಯ, ಬುರ್ಖಾ ಧರಿಸಿ ವಾದ ಮಾಡಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ಆದೇಶಿಸಿತು. ಈ ಬಗ್ಗೆ ಪರಿಶೀಲನೆ ನಡೆಸಿದ ರಿಜಿಸ್ಟ್ರಾರ್ ಜನರಲ್ ಬುರ್ಖಾ ಧರಿಸಿ ವಾದ ಮಾಡಲು ಅವಕಾಶ ನೀಡುವಂಥ ಯಾವುದೇ ನಿಬಂಧನೆ ಇಲ್ಲ ಎಂದು ಡಿಸೆಂಬರ್ 5 ರಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಬಿಸಿಐ ನಿಯಮಗಳ ಅಧ್ಯಾಯ 4 (ಭಾಗ 6) ರ ಸೆಕ್ಷನ್ 49 (1) (ಜಿಜಿ) ಅಡಿಯಲ್ಲಿ ನಿಯಮಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಮೋಕ್ಷ ಖಜುರಿಯಾ ಕಾಜ್ಮಿ, ಮುಖ ಮುಚ್ಚುವಂಥ ಉಡುಪು ಧರಿಸಲು ಅನುಮತಿ ನೀಡುವಂಥ ಯಾವುದೇ ನಿಯಮವಿಲ್ಲ ಎಂದು ಡಿಸೆಂಬರ್ 13ರಂದು ದೃಢಪಡಿಸಿದರು.
ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಡಿಸೆಂಬರ್ 5ರಂದು ಸಲ್ಲಿಸಿದ ವರದಿಯಲ್ಲಿ, ಬಿಸಿಐ ನಿಯಮಗಳ ಅಧ್ಯಾಯ 4 (ಭಾಗ 6)ರಲ್ಲಿ ಮಹಿಳಾ ವಕೀಲರ ಡ್ರೆಸ್ ಕೋಡ್ ಪ್ರಕಾರ ನ್ಯಾಯಾಲಯದಲ್ಲಿ ಬುರ್ಖಾ ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ.
ವರದಿಯ ಪ್ರಕಾರ, ವಕೀಲರಿಗೆ ನಿಗದಿಪಡಿಸಿದ ಡ್ರೆಸ್ ಕೋಡ್ ಹಲವಾರು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಮಹಿಳೆಯರು ಬಿಳಿ ಕಾಲರ್ ಹೊಂದಿರುವ ಕಪ್ಪು ಪೂರ್ಣ-ತೋಳಿನ ಜಾಕೆಟ್ ಅಥವಾ ರವಿಕೆಯನ್ನು ಮೇಲಿನ ಉಡುಪು ಆಗಿ ಧರಿಸಬೇಕಾಗುತ್ತದೆ. ಪರ್ಯಾಯವಾಗಿ, ಕಾಲರ್ ಹೊಂದಿರುವ ಅಥವಾ ಇಲ್ಲದ, ಬಿಳಿ ಬ್ಯಾಂಡ್ಗಳೊಂದಿಗೆ ಜೋಡಿಸಲಾದ ಬಿಳಿ ರವಿಕೆ ಮತ್ತು ಕಪ್ಪು ಕೋಟ್ ಅನ್ನು ಸಹ ಅನುಮತಿಸಲಾಗಿದೆ.
ಕೆಳ ಉಡುಪುಗಳಿಗಾಗಿ ಮಹಿಳೆಯರು ಬಿಳಿ, ಕಪ್ಪು ಅಥವಾ ಯಾವುದೇ ಮೃದುವಾದ ಬಣ್ಣದ ಸೀರೆಗಳು ಅಥವಾ ಉದ್ದನೆಯ ಸ್ಕರ್ಟ್ಗಳನ್ನು ಧರಿಸಬಹುದು. ಇತರ ಆಯ್ಕೆಗಳಲ್ಲಿ ಫ್ಲೇರ್ಡ್ ಪ್ಯಾಂಟ್, ಚೂಡಿದಾರ್-ಕುರ್ತಾ, ಸಲ್ವಾರ್-ಕುರ್ತಾ ಅಥವಾ ಬಿಳಿ, ಕಪ್ಪು, ಕಪ್ಪು-ಪಟ್ಟಿ ಅಥವಾ ಬೂದು ಬಣ್ಣದ ಪಂಜಾಬಿ ಉಡುಪುಗಳು ಸೇರಿವೆ. ಇವುಗಳನ್ನು ಬಿಳಿ ಅಥವಾ ಕಪ್ಪು ಬಣ್ಣದಲ್ಲಿ ದುಪಟ್ಟಾದೊಂದಿಗೆ ಅಥವಾ ಇಲ್ಲದೆ ಧರಿಸಬಹುದು. ಸಾಂಪ್ರದಾಯಿಕ ಉಡುಗೆ, ಕಪ್ಪು ಕೋಟ್ ಮತ್ತು ಬ್ಯಾಂಡ್ ಗಳೊಂದಿಗೆ ಜೋಡಿಸಲ್ಪಟ್ಟರೂ ಸಹ ಅದು ಸ್ವೀಕಾರಾರ್ಹವಾಗಿದೆ.
ಇದನ್ನೂ ಓದಿ : ಒಂದೂವರೆ ವರ್ಷದಲ್ಲಿ ದಾಖಲೆಯ 10 ಲಕ್ಷ ಯುವಕರಿಗೆ ಖಾಯಂ ಸರ್ಕಾರಿ ಉದ್ಯೋಗ: ಪ್ರಧಾನಿ ಮೋದಿ - ROZGAR MELA