ಆಲಪ್ಪುಳ (ಕೇರಳ):ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಡಿಸೆಂಬರ್ 2ರ ರಾತ್ರಿ 9.45ಕ್ಕೆ ಈ ದುರ್ಘಟನೆ ಕಲರ್‌ಕೋಡ್ ಬಳಿ ಸಂಭವಿಸಿದೆ.
ಕಾರಿನಲ್ಲಿ 11 ವೈದ್ಯಕೀಯ ವಿದ್ಯಾರ್ಥಿಗಳಿದ್ದರು. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಐವರು ವೈದ್ಯಕೀಯ ವಿದ್ಯಾರ್ಥಿಗಳ ಮರಣೋತ್ತರ ಪರೀಕ್ಷೆ ಇಂದು (ಡಿಸೆಂಬರ್ 3) ಬೆಳಗ್ಗೆ 9 ಗಂಟೆಗೆ ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ. ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಮೃತ ದೇಹಗಳನ್ನು ಆಲಪ್ಪುಳದ ವಂದನಂ ವೈದ್ಯಕೀಯ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಮೃತದೇಹಗಳನ್ನು ಅವರವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಇನ್ನು ಅಪಘಾತದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ರಾತ್ರಿ ಕಲರಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ವಿದ್ಯಾರ್ಥಿಗಳು ವಂದನಂನಿಂದ ಚಿತ್ರಮಂದಿರಕ್ಕೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಓವರ್ಟೇಕ್ ಮಾಡಲು ಚಾಲಕ ಮುಂದಾಗಿದ್ದ. ಈ ವೇಳೆ, ಚಾಲಕನ ಕಣ್ಣು ಮಂಜಾಗಿದ್ದು, ಈ ಅಪಘಾತ ಸಂಭವಿಸಿದೆ ಎಂದು ಎಂವಿಡಿ ಅಧಿಕಾರಿಗಳು ಮತ್ತು ಪೊಲೀಸರು ಮಾಹಿತಿ ನೀಡಿದ್ದಾರೆ.